Malenadu Mitra
ರಾಜ್ಯ ಶಿವಮೊಗ್ಗ

ಮಾ.27ರಂದು ಮೆಗಾ ಲೋಕ ಅದಾಲತ್

ಕಳೆದ ಮೆಗಾ ಲೋಕ ಅದಾಲತ್‍ನಲ್ಲಿ 7551 ಪ್ರಕರಣಗಳ ವಿಲೇವಾರಿ: ನ್ಯಾ.ಮುಸ್ತಫಾ ಹುಸೇನ್

ಈ ವರ್ಷದ ಪ್ರಥಮ ಮೆಗಾ ಲೋಕ ಅದಾಲತ್ ಮಾರ್ಚ್ 27ರಂದು ನಡೆಯಲಿದ್ದು, ಕಳೆದ ಡಿಸೆಂಬರ್‍ನಲ್ಲಿ ನಡೆದ ಮೆಗಾ ಲೋಕ ಅದಾಲತ್‍ನಲ್ಲಿ 7551 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ ಅವರು ತಿಳಿಸಿದರು.

ಅವರು ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣಗಳು, ಹಿಂದೂ ವಾರಸು ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು, ವಿಭಜನಾ ಪ್ರಕರಣಗಳು ಹಾಗೂ ಇನ್ನಿತರ ಪ್ರಕರಣಗಳನ್ನು ಗುರುತಿಸಿ, ಉಭಯ ಕಕ್ಷಿದಾರರನ್ನು ಕರೆಯಿಸಿಕೊಂಡು ಅವರ ಒಪ್ಪಿಗೆಯ ಪ್ರಕಾರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದರು.

ಇದಲ್ಲದೆ ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ಇತರ ಯಾವುದೇ ನ್ಯಾಯಾಲಯಕ್ಕೆ ಬರಬಹುದಾದ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಲಾಗುವುದು. ಈ ಪ್ರಕರಣಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಯಿಸಿ ರಾಜಿ ಸಂಧಾನ ಮಾಡಲು ಪ್ರಯತ್ನಿಸಲಾಗುವುದು. ಇಂತಹ ಅವಾರ್ಡ್‍ಗಳನ್ನು ಸಂಬಂಧಿಸಿದ ಸಿವಿಲ್ ನ್ಯಾಯಾಲಯಗಳಲ್ಲಿ ಅಮಲ್ ಬಜಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಇದರಿಂದ ಕಕ್ಷಿದಾರರಿಗೆ ನ್ಯಾಯಾಲಯದ ಖರ್ಚು ಮತ್ತು ಅವರ ಸಮಯ ಉಳಿಯಲಿದೆ ಎಂದು ಅವರು ಹೇಳಿದರು.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಒಟ್ಟು 50204 ಪ್ರಕರಣಗಳು ಬಾಕಿ ಇದ್ದು, ಅವುಗಳ ಪೈಕಿ 26078 ಪ್ರಕರಣಗಳು ರಾಜಿಯಾಗಬಹುದಾದ ಪ್ರಕರಣಗಳಾಗಿವೆ. ಇದುವರೆಗೆ 2730 ಪ್ರಕರಣಗಳನ್ನು ಮೆಗಾ ಲೋಕ ಅದಾಲತ್‍ಗಾಗಿ ಗುರುತಿಸಲಾಗಿದ್ದು, ಇನ್ನಷ್ಟು ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಡಿಸೆಂಬರ್‍ನಲ್ಲಿ ನಡೆದ ಮೆಗಾ ಲೋಕ ಅದಾಲತ್‍ಗಾಗಿ 13138 ಪ್ರಕರಣಗಳನ್ನು ಗುರುತಿಸಲಾಗಿತ್ತು ಎಂದರು.

ಸಂತ್ರಸ್ತರಿಗೆ ಪರಿಹಾರ ಯೋಜನೆ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಕನಾಟಕ ಸಂತ್ರಸ್ತ ಯೋಜನೆ ಅಡಿ, ಮತ್ತೊಬ್ಬರ ಅಪರಾಧಿ ಕೃತ್ಯದಿಂದಾಗಿ ಮರಣ, ಅತ್ಯಾಚಾರ, ಆಸಿಡ್ ದಾಳಿ ಅಥವಾ ಇನ್ನಿತರ ಯಾವುದೇ ರೀತಿಯಿಂದ ಗಾಯಗೊಂಡ ನೊಂದ ವ್ಯಕ್ತಿಗಳಿಗೆ ಪರಿಹಾರ ನೀಡಲು ವಿಚಾರಣೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ 2014ರಿಂದ ಇಲ್ಲಿಯವರೆಗೆ 292 ಪ್ರಕರಣಗಳು ದಾಖಲಾಗಿದ್ದು, 288 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 170ಪ್ರಕರಣಗಳಲ್ಲಿ 4.24 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ನೊಂದ ವ್ಯಕ್ತಿಗಳು ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಉಪಸ್ಥಿತರಿದ್ದರು.

Ad Widget

Related posts

ಈಡಿಗ ಸಮುದಾಯದ ಮಠಗಳಿಂದ ಸಮಾಜಮುಖಿ ಕೆಲಸಕರ್ನಾಟಕ ಪ್ರದೇಶ ಈಡಿಗ ಸಂಘದ ಪ್ರಮುಖರನ್ನು ಗೌರವಿಸಿದ ರೇಣುಕಾನಂದ ಸ್ವಾಮೀಜಿ

Malenadu Mirror Desk

ಜಿಲ್ಲೆಯಾದ್ಯಂತ ಭಾರೀ ಮಳೆ- ಮನೆಗಳಿಗೆ ನುಗ್ಗಿದ ನೀರು, ತೋಟ-ಗದ್ದೆ ಜಲಾವೃತ.

Malenadu Mirror Desk

ಸಮರ ಕಾಲದಲ್ಲಿ ಮಂಕು ಬಡಿದ ಸಾಗರ ಕಾಂಗ್ರೆಸ್ , ಕಾಗೋಡು ತಿಮ್ಮಪ್ಪರ ನಿರ್ಧಾರವೇ ಕ್ಷೇತ್ರಕ್ಕೆ ದಿಕ್ಸೂಚಿ..

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.