Malenadu Mitra
ರಾಜಕೀಯ ರಾಜ್ಯ ಸೊರಬ

ಕುಮಾರ ಬಂಗಾರಪ್ಪ ಮುನಿಸು: ಮನವೊಲಿಸಿದ ಸಂಸದರು


ಮೂಗೂರು ಏತಾನೀರಾವರಿ ಉದ್ಘಾಟನೆಯಲ್ಲಿ ಶಾಸಕರ ಕಡೆಗಣನೆ

ಸೊರಬ ತಾಲೂಕಿನ ಮಹತ್ವಾಕಾಂಕ್ಷಿ ಮೂಗೂರು ಏತ ನೀರಾವರಿ ಲೋಕಾರ್ಪಣೆ ಕಾರ್ಯಕ್ರಮದಕ್ಕೆ ಬರುವುದಿಲ್ಲ ಎಂದು ಮುನಿಸಿಕೊಂಡಿದ್ದ ಶಾಸಕ ಕುಮಾರ ಬಂಗಾರಪ್ಪ ಅವರನ್ನು ಮನವೊಲಿಸಲು ಸಂಸದ ಬಿ.ವೈ ರಾಘವೇಂದ್ರ ಹಾಗೂ ಬಿಜೆಪಿ ಮುಖಂಡರು ಹರಸಾಹಸ ಪಟ್ಟರೆಂಬ ಮಾಹಿತಿ ಲಭ್ಯವಾಗಿದೆ.
ನೀರಾವರಿ ಯೋಜನೆ ಉದ್ಘಾಟನೆಯಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಸಿದ್ದಪಡಿಸಲಾದ ಸ್ಟೇಜ್ ದಾಕ್ಯುಮೆಂಟರಿಯಲ್ಲಿ ಕುಮಾರ ಬಂಗಾರಪ್ಪ ಅವರ ಚಿತ್ರವೇ ಇರದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಶಾಸಕ ಕುಮಾರ ಬಂಗಾರಪ್ಪ ಅವರು ನೀರಾವರಿ ನಿಗಮದ ಅಧಿಕಾರಿಗಳಿಗೆ ಕೇಳಿದರೆ ಅಲ್ಲಿ ಸಮರ್ಪಕ ಉತ್ತರ ಬಂದಿಲ್ಲ. ಈ ಕಾರಣದಿಂದ ಹಾಗಿದ್ದರೆ ಕಾರ್ಯಕ್ರಮ ನೀವೇ ಮಾಡಿಕೊಳ್ಳಿ ಎಂದು ಶಾಸಕರು ಮುನಿಸಿಕೊಂಡಿದ್ದರು. ಕುಮಾರಬಂಗಾರಪ್ಪ ಅವರ ಬೆಂಬಲಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಇಲಾಖೆಯ ಕ್ರಮವನ್ನು ಖಂಡಿಸಿದ್ದಲ್ಲದೆ, ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು.
ಈ ವಿಚಾರ ತಿಳಿದ ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರು ಕುಮಾರ ಬಂಗಾರಪ್ಪ ಅವರ ಮನೆಗೆ ಭೇಟಿ ನೀಡಿದ್ದರು. ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಶಾಸಕರೊಂದಿಗೆ ಚರ್ಚಿಸಿದ ಮುಖಂಡರು ಅವರ ಮನವೊಲಿಸುವಲ್ಲಿ ಸಫಲರಾದರು ಎನ್ನಲಾಗಿದೆ.
ಸೊರಬ ಬಿಜೆಪಿಯಲ್ಲಿ ಮೂಲ ಬಿಜೆಪಿಗರು ಹಾಗೂ ಶಾಸಕರ ಬಣದ ನಡುವೆ ಮೊದಲಿಂದಲೂ ವೈಮನಸ್ಸು ಇದೆ. ಬಿಜೆಪಿ ಮಂಡಲ ಅಧ್ಯಕ್ಷರ ನೇಮಕದಲ್ಲಿ ಜಿಲ್ಲಾ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಕುಮಾರ್ ಬಂಗಾರಪ್ಪ ಅವರಿಗೆ ವಿರುದ್ಧವಾದ ನಿರ್ಣಯ ಕೈಗೊಂಡಿದ್ದರಿಂದ ಆ ಸಂದರ್ಭದಲ್ಲಿ ಭಿನ್ನಮತ ಉಂಟಾಗಿತ್ತು.
ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ತಾಲೂಕು ಅಧ್ಯಕ್ಷರಿಲ್ಲದೆ ಉಸ್ತುವಾರಿ ಸಮಿತಿ ಮೂಲಕ ಎದುರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪಕ್ಷದ ಕೆಲವು ನಾಯಕರ ಕುಮ್ಮಕ್ಕಿನಿಂದ ಸೊರಬದ ಮೂಲ ಬಿಜೆಪಿಯ ಕೆಲವರು ಶಾಸಕರ ನಿರ್ಧಾರಗಳಿಗೆ ವಿರುದ್ಧವಾಗಿಯೇ ಇದ್ದಾರೆ. ಕ್ಷೇತ್ರದಲ್ಲಿ ಪಕ್ಷ ಗೆಲುವಿಗೆ ನಾವು ಬೇಕು. ಆದರೆ ಅಧಿಕಾರ ನಡೆಸಲು ಮೂಲ ಬಿಜೆಪಿ ಎಂಬ ವಿಷಯ ತರುತ್ತಾರೆ ಎಂಬ ಆರೋಪ ಶಾಸಕರ ಬಣದ್ದಾಗಿದೆ. ಶಾಸಕರು ತಮ್ಮ ಬೆಂಬಲಿಗರಿಗೆ ಮಣೆ ಹಾಕಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ ಎಂಬುದು ಬಿಜೆಪಿ ಸ್ಥಳೀಯ ಕೆಲವು ಮುಖಂಡರ ಆರೋಪ.
ಈ ಭಿನ್ನಮತದ ಮುಂದುವರಿದ ಭಾಗವಾಗಿಯೇ ಮಹತ್ತರ ಯೋಜನೆ ಉದ್ಘಾಟನೆ ಸಂದರ್ಭದಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಶಾಸಕರು ಬೇಸರ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಬರುವ ಕಾರ್ಯಕ್ರಮದಲ್ಲಿ ಹೀಗೆ ಆಗಬಾರದೆಂಬ ಕಾರಣಕ್ಕೆ ಪಕ್ಷದ ಮುಖಂಡರು ಶಾಸಕರ ಮನವೊಲಿಸಿದರೆನ್ನಲಾಗಿದೆ.

ಮಹತ್ತರ ಯೋಜನೆ:
ಆನವಟ್ಟಿ ಭಾಗದ ೧೬ ಹಳ್ಳಿಗಳ ಕೃಷಿ ಭೂಮಿಗೆ ನೀರಾವರಿ ಒದಗಿಸುವ ಮೂಗೂರು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮಾಜಿ ಸಿಎಂ ಬಂಗಾರಪ್ಪ ಕಾಲದಿಂದಲೂ ಪ್ರಯತ್ನ ಮುಂದುವರಿದಿತ್ತು. ಮಧುಬಂಗಾರಪ್ಪ ಶಾಸಕರಾಗಿದ್ದ ಅವಧಿಯಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕಿ ಯೋಜನೆಗೆ ಅನುದಾನವನ್ನು ಮೀಸಲಿಡಲಾಗಿತ್ತು. ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಶಾಸಕ ಕುಮಾರ ಬಂಗಾರಪ್ಪ ಅವರು ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, ದಶಕಗಳ ಕಾಲದ ಬೇಡಿಕೆ ಈಡೇರಿದಂತಾಗಿದೆ.

ಪ್ಲೈಟ್ ವಿಳಂಬವಾಗಿದ್ದರಿಂದ ಕಾರ್ಯಕ್ರಮ ತಡವಾಗಿದೆ. ಸಂಜೆ ಶಿವಮೊಗ್ಗದಲ್ಲಿ ನಮ್ಮೊಲುಮೆ ಕಾರ್ಯಕ್ರಮ ಇದೆ. ಅದಕ್ಕೆ ಕುಮಾರ ಬಂಗಾರಪ್ಪ ಅವರನ್ನು ಆಹ್ವಾನಿಸಲು ಮನೆಗೆ ಬಂದಿದ್ದೆ. ನೀರಾವರಿ ಯೋಜನೆ ಉದ್ಘಾಟನೆ ವಿಚಾರದಲ್ಲಿ ಯಾವುದೇ ಮುನಿಸಿಲ್ಲ. ವೇದಿಕೆ ಹಿಂಬಾಗ ಬಿತ್ತರಿಸುವ ದಾಕ್ಯುಮೆಂಟರಿಯಲ್ಲಿ ಅವರನ್ನು ಕಡೆಗಣಿಸಿದ ವಿಚಾರ ನಂಗೆ ಗೊತ್ತಿಲ್ಲ
ಬಿ.ವೈ.ರಾಘವೇಂದ್ರ, ಸಂಸದ

ಕುಮಾರ ಬಂಗಾರಪ್ಪ ಪಕ್ಷಕ್ಕೆ ಬಂದಾಗಿನಿಂದ ತಾಲೂಕು ಮುಖಂಡರು ಅವರೊಂದಿಗಿದ್ದಾರೆ. ಶಾಸಕರು ಮುನಿಸಿಕೊಂಡಿಲ್ಲ. ಉಪಹಾರಕ್ಕೆ ಮನೆಗೆ ಕರೆದಿದ್ದರಿಂದ ಬಂದಿದ್ದೇವೆ. ಮುನಿಸು ಎಂಬುದು ಕಪೋಲ ಕಲ್ಪಿತ. ಪಕ್ಷದಲ್ಲಿ ಮೂಲ -ವಲಸೆ ಎಂಬುದಿಲ್ಲ ಎಲ್ಲರೂ ಒಂದೇ
-ಟಿ.ಡಿ.ಮೇಘರಾಜ್ ಬಿಜೆಪಿ ಜಿಲ್ಲಾಧ್ಯಕ್ಷ

Ad Widget

Related posts

ಶರಾವತಿ ಸಂತ್ರಸ್ಥರ ಸಮಸ್ಯೆ ಕುರಿತ ಸಭೆ

Malenadu Mirror Desk

ಶಿವಮೊಗ್ಗದಲ್ಲಿ ಇಳಿದ ಕೊರೊನ,ಸೊರಬದಲ್ಲಿ ಜೀರೊ ಕೇಸ್

Malenadu Mirror Desk

ಕೆ ಬಿ ಪ್ರಸನ್ನ ಕುಮಾರ್ ರವರ ಹುಟ್ಟು ಹಬ್ಬ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.