ದಶಕಗಳ ಕನಸು ಮೂಗೂರು ಏತಾನೀರಾವರಿ ಯೋಜನೆ ಅನುಷ್ಠಾನದ ಮಾಹಿತಿ ಉಳ್ಳ ದಾಕ್ಯುಮೆಂಟರಿಯಲ್ಲಿ ತಮ್ಮನ್ನು ಅಲಕ್ಷ್ಯ ಮಾಡಲಾಗಿತ್ತೆಂದು ಮುನಿಸಿಕೊಂಡಿದ್ದ ಮಾಜಿ ಸಚಿವ ಹಾಗೂ ಸೊರಬ ಶಾಸಕ ಕುಮಾರ ಬಂಗಾರಪ್ಪ ಭಾನುವಾರ ಶಿವಮೊಗ್ಗದಲ್ಲಿ ನಡೆದ ನಮ್ಮೊಲುಮೆ ಕಾರ್ಯಕ್ರಮಕ್ಕೂ ಗೈರಾಗಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ಎಲ್ಲ ಸರಿ ಇದ್ದಿದ್ದರೆ, ಕಾರ್ಯಕ್ರಮಕ್ಕೆ ಬಂದು ಒಂದು ಹಾಡನ್ನೂ ಕುಮಾರ ಬಂಗಾರಪ್ಪ ಹೇಳುವವರಿದ್ದರು. ಆದರೆ ಕ್ಷೇತ್ರದ ವಿಚಾರದಲ್ಲಿನ ಅತಿಯಾದ ಹಸ್ತಕ್ಷೇಪಕ್ಕೆ ಬೇಸರ ಮಾಡಿಕೊಂಡ ಅವರು ಸಂಜೆಯ ಕಾರ್ಯಕ್ರಮದಿಂದ ದೂರ ಉಳಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಬಂಗಾರಪ್ಪ ಅವರ ಕಾಲದಲ್ಲಿಯೇ ಮೂಗೂರು ಏತ ನೀರಾವರಿಗೆ ಭೂ ಸ್ವಾಧಿನ ಮಾಡಿಕೊಳ್ಳಲಾಗಿತ್ತು. ಪೈಪ್ ಲೈನ್ ಕೂಡಾ ಹಾಕಿದ್ದು, ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಯೋಜನೆಯೂ ಸ್ಥಗಿತವಾಗಿತ್ತು. ಬಳಿಕ ಮೂಗೂರು ಏತನೀರಾವರಿ ಬಗ್ಗೆ ಅಷ್ಟೊಂದು ಗಮನ ಹರಿಸಿರಲಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟಗಳೂ ನಡೆದಿದ್ದವು. ಮಧು ಬಂಗಾರಪ್ಪ ನೇತೃತ್ವದಲ್ಲಿಯೂ ಪಾದಯಾತ್ರೆ ನಡೆದಿತ್ತು. ಇದಾದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂಗೂರು, ಮೂಡಿ ಹಾಗೂ ಕಚವಿ ಏತಾ ನಿರಾವರಿಗೆ ಅನುದಾನ ಘೋಷಣೆ ಮಾಡಲಾಗಿತ್ತಾದರೂ ಅನುದಾನ ಬಿಡುಗಡೆ ಮಾಡಿರಲಿಲ್ಲ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಕುಮಾರ ಬಂಗಾರಪ್ಪ ಹಾಗೂ ಕ್ಷೇತ್ರದ ಜನರ ಮನವಿ ಮೇರೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರು. ಮೂಗೂರು ಯೋಜನೆ ಪೂರ್ಣಗೊಂಡಿದ್ದು, ಉಳಿದೆರಡು ಯೋಜನೆಗಳು ಪ್ರಗತಿಯಲ್ಲಿವೆ. ಮಹತ್ವದ ೧೦೫ ಕೋಟಿ ರೂ.ಯೋಜನೆ ಅನುಷ್ಠಾನದ ಹಿಂದೆ ಇಷ್ಟೆಲ್ಲ ಪ್ರಯತ್ನಗಳಿದ್ದರೂ ಯೋಜನೆ ಅನುಷ್ಠಾನ ವರದಿಯ ಸಿಡಿಯಲ್ಲಿ ಮುಖ್ಯಮಂತ್ರಿ ಮತ್ತು ಸಂಸದ ರಾಘವೇಂದ್ರ ಅವರ ಪಾತ್ರವನ್ನೇ ಚಿತ್ರೀಕರಿಸಲಾಗಿದೆ. ಯೋಜನೆಗೆ ಪ್ರಯತ್ನ ಮಾಡಿದ್ದ ಉಳಿದವರ ಯಾವುದೇ ಅಂಶಗಳು ಇಲ್ಲದ ಕಾರಣ ಕುಮಾರ ಬಂಗಾರಪ್ಪ ಬೇಸರಿಸಿಕೊಂಡಿದ್ದರೆನ್ನಲಾಗಿದೆ.
ಬಿಎಸ್‌ವೈ ಮನವೊಲಿಕೆ:
ಸಿಡಿ ಮಾಹಿತಿ ತಿಳಿದು ಮುನಿಸಿಕೊಂಡಿದ್ದ ಶಾಸಕರ ಮನವೊಲಿಜೆಗೆ ಬಂದ ನೀರಾವರಿ ನಿಗಮದ ಎಂಡಿಗೆ ಕುಮಾರ್ ಗದರಿದ್ದಾರೆನ್ನಲಾಗಿದೆ. ಈ ಸಂದರ್ಭ ಇದರಲ್ಲಿ ನನ್ನ ಪಾತ್ರವಿಲ್ಲ ಎಲ್ಲ ಸಂಸದರ ಸೂಚನೆಯಂತೆ ನಡೆದಿದೆ ಎಂದು ಜಾರಿಕೊಂಡರೆನ್ನಲಾಗಿದೆ. ಈ ಮಾತು ಕೇಳಿದ ಕುಮಾರ್ ಕಾರ್ಯಕ್ರಮಕ್ಕೆ ಬರುವುದಿಲ್ಲ ನೀವೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಭಾನುವಾರ ಬೆಳಕ್ಕೆ ಸಂಸದರು ಸೇರಿದಂತೆ ಮನವೊಲಿಕೆಗೆ ಹೋದ ಮುಖಂಡರಿಗೆ ಯಾವ ಕಾರಣಕ್ಕೂ ಬರುವುದಿಲ್ಲ ಎಂದು ಹೇಳಿದ್ದಾರೆ. ಸುಮಾರು ಎರಡು ಗಂಟೆ ಮನವೊಲಿಕೆ ನಡೆಯಿತು. ಈ ಸಂದರ್ಭ ತಾಲೂಕು ಬಿಜೆಪಿಯ ಕೆಲವು ಮುಖಂಡರು ನೇರವಾಗಿ ಸಂಸದರ ಸಂಪರ್ಕ ಇಟ್ಟುಕೊಂಡು ಮಾಡುತ್ತಿರುವ ಕಿತಾಪತಿಯ ಬಗ್ಗೆಯೇ ಕುಮಾರ್ ಅಸಮಾಧಾನ ಹೊರಹಾಕಿದರೆನ್ನಾಗಿದೆ. ಕೊನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ದೂರವಾಣಿ ಮೂಲಕ ಮನವೊಲಿಕೆ ಮಾಡಿಕೊಡಲಾಯಿತು. ನಿಮ್ಮ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ ಆದರೆ ನಡುವಂತರಲ್ಲಿ ಕೆಲ ವ್ಯತ್ಯಾಸಗಳಾಗುತ್ತಿವೆ ಎಂದು ಕುಮಾರ್ ಹೇಳಿದರೆನ್ನಲಾಗಿದೆ. ಎಲ್ಲವನ್ನೂ ಸರಿಮಾಡುವುದಾಗಿ ಸಿಎಂ ಹೇಳಿದ ಬಳಿಕ ಕುಮಾರ್‌ಬಂಗಾರಪ್ಪ ಕಾರ್ಯಕ್ರಮಕ್ಕೆ ಹೊರಟರು. ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು ಕುಮಾರ್ ಕೈಹಿಡಿದು ವೇದಿಕೆ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದರು. ಈ ಎಲ್ಲ ಬೆಳವಣಿಗೆ ಕಾರಣಕ್ಕೆ ಕುಮಾರ್ ನಮ್ಮೊಲುಮೆ ಕಾರ್ಯಕ್ರಮಕ್ಕೂ ಬರಲಿಲ್ಲ ಎನ್ನಲಾಗಿದೆ.
previous post