Malenadu Mitra
ಭಧ್ರಾವತಿ ರಾಜ್ಯ

ಭದ್ರಾವತಿಯಲ್ಲಿ ಕೋಮುಗಲಭೆ ಸೃಷ್ಟಿಸಲು ಬಿಜೆಪಿ ಹುನ್ನಾರ

ಭದ್ರಾವತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಬೇಕೆಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಬಡ್ಡಿ ಪಂದ್ಯಾವಳಿಯಲ್ಲಿ ಗಲಾಟೆ ಮಾಡಿದ್ದ ಬಿಜೆಪಿ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ದೂರು ನೀಡಿದ್ದಾರೆ. ಪೊಲೀಸರು ಬಿಜೆಪಿ ಏಜೆಂಟರಂತೆ ನಡೆದುಕೊಳ್ಳುತ್ತಿದ್ದು, ನಮ್ಮ ಪಕ್ಷದ ಕಾರ್ಯಕರ್ತರನ್ನು ಸುಖಾಸುಮ್ಮನೆ ಬಂಧಿಸುತ್ತಿದ್ದಾರೆ. ಅಮಾಯಕ ಜನರನ್ನು ಕರೆದುಕೊಂಡು ಹೋಗಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಈ ವರ್ತನೆ ಖಂಡಿಸಿ ಮಾ.೯ ರಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ನಾಯಕರೇ ಪ್ರಾಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿದ್ದರು. ಆದರೆ ಈ ಪಂದ್ಯಾವಳಿಗೆ ಗಲಾಟೆ ಮಾಡುವ ಉದ್ದೇಶದಿಂದಲೇ ಬಿಜೆಪಿಯ ಕೆಲವರು ಬಂದಿರುವುದು ಕೊನೆಯಲ್ಲಿ ನಡೆದ ಘಟನೆಯಲ್ಲಿ ರುಜುವಾತಾಗಿದೆ. ಪಂದ್ಯಾವಳಿ ಮುಗಿದ ಬಳಿಕ ದುಬಾರಿ ಮ್ಯಾಟ್‌ಗೆ ಬೆಂಕಿ ಹಚ್ಚಿ ಸುಡಲಾಗಿದೆ. ಪಟಾಕಿ ಹಚ್ಚಿ ಕಿರಿಕಿರಿ ಮಾಡಲಾಗಿದೆ. ಈ ಸಂದರ್ಭ ಪ್ರಶ್ನಿಸಿದ ಆಯೋಜಕರ ಮೇಲೆ ಹಲ್ಲೆ ನಡೆಸಲಾಗಿದೆ. ತಮ್ಮದೇ ಸರಕಾರ ಇದೆ ಎಂಬ ಅಹಂಕಾರದಿಂದ ಅಮಾಯಕರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಶಾಸಕ ಸಂಗಮೇಶ್ ಅವರ ಕುಟುಂಬದವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಕಿಮ್ಮನೆ ರತ್ನಾಕರ್ ದೂರಿದರು.
ವಿಧಾನ ಸಭೆ ಅಧಿವೇಶನಕ್ಕೆ ತೆರಳಿದ ಶಾಸಕರು ಊರಲ್ಲಿಲ್ಲ ಎಂದು ಅವರ ಬೆಂಬಲಿಗರ ಮೇಲೆ ಪೋಲಿಸರು ದೌರ್ಜನ್ಯ ನಡೆಸುತ್ತಿದ್ದಾರೆ. ಮನೆಯಲ್ಲಿ ತಮ್ಮ ಪಾಡಿಗೆ ಇದ್ದ ಕಾರ್ಯಕರ್ತರನ್ನು ಠಾಣೆಗೆ ಕರೆದೊಯ್ಯಲಾಗುತ್ತಿದೆ. ಘಟನೆ ಕುರಿತು ಬೃಹತ್ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದ್ದ ಕಾಂಗ್ರೆಸ್‌ಗೆ ಅವಕಾಶ ನೀಡಲಿಲ್ಲ. ನಾವು ತಾಲೂಕು ಕಚೇರಿ ಮುಂದೆ ಧರಣಿ ಮಾಡಿದ ಆ ಸಂದರ್ಭ ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಐಜಿ ಜೊತೆ ಮಾತನಾಡಿದ್ದೇವೆ. ಇಷ್ಟಾದರೂ ಬಿಜೆಪಿಯವರಿಗೆ ಪ್ರತಿಭಟನೆಗೆ ಅವಕಾಶ ನೀಡಿ ನಮಗೆ ನಿಷೇಧಾಜ್ಞೆ ಹೇರಲಾಗಿದೆ. ಸರಕಾರದ ಕೈಗೊಂಬೆಯಾಗಿರುವ ಪೊಲೀಸರು ಸಹಜ ನ್ಯಾಯ ಪಾಲನೆ ಮಾಡದಿದ್ದಲ್ಲಿ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಿಮ್ಮನೆ ಎಚ್ಚರಿಕೆ ನೀಡಿದರು.
ಕೋಮುಗಲಭೆಗೆ ಸಿದ್ಧತೆ:
ಬಿಜೆಪಿ ಈ ತನಕ ಭದ್ರಾವತಿ ವಿಧಾನ ಸಭೆ ಕ್ಷೇತ್ರದಲ್ಲಿ ನಡೆದ ಚುನಾವಣೆಗಳಲ್ಲಿ ಠೇವಣಿ ಉಳಿಸಿಕೊಂಡಿಲ್ಲ. ಸ್ಥಳೀಯ ಸಂಸ್ಥೆಗಳಲ್ಲೂ ಅಲ್ಲಿ ಯಾವುದೇ ಜನಪ್ರತಿನಿಧಿ ಇಲ್ಲ. ಮಾಜಿ ಶಾಸಕ ಅಪ್ಪಾಜಿ ಗೌಡರು ನಿಧನರಾದ ಬಳಿಕ ತಮ್ಮ ಪಕ್ಷವನ್ನು ಸಂಘಟಿಸಲು ಕೋಮು ಗಲಭೆ ಸೃಷ್ಟಿಸಲು ಬಿಜೆಪಿ ಮುಂದಾಗಿದೆ. ಇದಕ್ಕೆ ಆರ್‌ಎಸ್‌ಎಸ್ ಕುಮ್ಮಕ್ಕೂ ಇದೆ. ಸಾಗರ, ಶಿವಮೊಗ್ಗ ಮುಂತಾದೆಡೆ ಕೋಮು ದ್ವೇಷ ಹೆಚ್ಚಿಸಿ ರಾಜಕೀಯ ಲಾಭ ಮಾಡಿಕೊಂಡಿರುವ ಬಿಜೆಪಿ ಈಗ ಭದ್ರಾವತಿಯಲ್ಲೂ ಅದೇ ಪ್ರವೃತ್ತಿ ಮುಂದುವರಿಸಲು ಹವಣಿಸುತ್ತಿದೆ. ಇದಕ್ಕೆ ಕಾಂಗ್ರೆಸ್ ಬಿಡುವುದಿಲ್ಲ. ಶಾಸಕ ಸಂಗಮೇಶ್ ಹಾಗೂ ಅವರ ಬೆಂಬಲಿಗರ ಪರವಾಗಿ ಪಕ್ಷ ನಿಲ್ಲುತ್ತದೆ ಎಂದು ಕಿಮ್ಮನೆ ಹೇಳಿದರು.
ಬಿಜೆಪಿಯವರಿಗೆ ಅತ್ಯಾಚಾರ ಕ್ರೀಡೆ:
ಶೃಂಗೇರಿ ಸಮೀಪ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆಯಿತು. ಎಲ್ಲಾ ಆರೋಪಿಗಳೂ ಬಿಜೆಪಿಯವರೇ ಆದ್ದರಿಂದ ಯಾವ ನಾಯಕರೂ ಮಾತಾಡಲಿಲ್ಲ. ಸ್ಮೃತಿ ಇರಾನಿ, ಮಾಳವಿಕ ಅವರ ಧ್ವನಿ ಕೇಳಲೇ ಇಲ್ಲ. ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿದ್ದ ನಂದಿತಾ ಪ್ರಕರಣದಲ್ಲಿ ವೈದ್ಯರು ಅತ್ಯಾಚಾರ ನಡೆದಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟಿದ್ದರೂ, ಆರಗ ಜ್ಞಾನೇಂದ್ರ ಮತ್ತವರ ಆರ್‌ಎಸ್‌ಎಸ್ ಬಣ ದೊಡ್ಡ ಗಲಾಟೆ ಮಾಡಿತ್ತು. ಶೃಂಗೇರಿ ಪ್ರತರಣದಲ್ಲಿ ಇವರ ಗಂಟಲ ಪಸೆ ಆರಿ ಹೋಗಿದೆ. ಇವರ ಜಾಯಮಾನವೇ ಇಂತದು. ಬಿಜೆಪಿಯವರು ಮಾಡಿದರೆ ಅತ್ಯಾಚಾರವೂ ಇವರಿಗೆ ಕ್ರೀಡೆ ಎಂದು ಗಂಭೀರ ಆರೋಪ ಮಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡರಾದ ಕಲಗೋಡು ರತ್ನಾಕರ್, ಎಚ್.ಸಿ.ಯೋಗೇಶ್, ಷಡಾಕ್ಷರಿ, ವಿಜಯಕುಮಾರ್, ವೇದಾ ವಿಜಯಕುಮಾರ್, ಮುಡುಬಾ ರಾಘವೇಂದ್ರ ಮತ್ತಿರರು ಹಾಜರಿದ್ದರು.

ಭಾರತ ಮಾತಾಕಿ ಜೈ ಎಂದವರು ನಾವು
ಭದ್ರಾವತಿ ಕಾಂಗ್ರೆಸ್ ಮುಖಂಡ ಚಂದ್ರೇಗೌಡ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದು ಕಾಂಗ್ರೆಸ್. ಒಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಹೋರಾಡಿದ್ದ ನಮ್ಮ ಪಕ್ಷ. ಭದ್ರಾವತಿವತಿಯಲ್ಲಿ ಜೈ ಶ್ರೀರಾಂ ಎಂದು ಘೋಷಣೆ ಕೂಗಿದ್ದಕ್ಕೆ ಹಲ್ಲೆ ಮಾಡಿದರೆಂದು ಸುಳ್ಳು ಹೇಳುತ್ತಿದ್ದಾರೆ. ಅಂದು ಲಕ್ಷಾಂತರ ರೂ. ಮೌಲ್ಯದ ಕಬ್ಬಡಿ ಮ್ಯಾಟ್ ಸುಟ್ಟಿದ್ದರಿಂದ ಗಲಾಟೆ ನಡೆದಿದೆ. ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಎಲ್ಲಕ್ಕೂ ಕೋಮು, ಧರ್ಮದ ಬಣ್ಣ ಕಟ್ಟುತ್ತಿದೆ ಎಂದು ಸ್ಪಷ್ಟಪಡಿಸಿದರು.

Ad Widget

Related posts

ಸಂಘರ್ಷವಿಲ್ಲದೆ ಈಡಿಗ ಸಮಾಜ ಸಂಘಟನೆ: ವಿಖ್ಯಾತಾನಂದ ಸ್ವಾಮೀಜಿ ಈಡಿಗ ಸಮುದಾಯದ ಸಮಾಲೋಚನ ಸಭೆಯಲ್ಲಿ ಹೇಳಿಕೆ.

Malenadu Mirror Desk

ಮತ್ಸರ ಅಳಿಸುವ ನವರಾತ್ರಿ: ಸಿಗಂದೂರಲ್ಲಿ ಸಿದ್ದವೀರಸ್ವಾಮೀಜಿ ಆಶೀರ್ವಚನ

Malenadu Mirror Desk

ಗೀತಕ್ಕ ಸೋಲಿನ ಹೊಣೆ ನಾನೇ ಹೊರುವೆ , ಶಿವಮೊಗ್ಗದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ ಹೇಳಿಕೆ  

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.