ಜಿಲ್ಲಾ ಪಂಚಾಯಿತಿ ಸದಸ್ಯರ ಅವಧಿ ಮುಗಿಯುತ್ತಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಎಲ್ಲ ಸದಸ್ಯರನ್ನೂ ಅಭಿನಂದಿಸಿದರು. ಶಿವಮೊಗ್ಗ ಗೋಪಾಲಗೌಡ ಬಡಾವಣೆಯಲ್ಲಿ ಸಾಯಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಸಂಪೂರ್ಣ ಸಮಸ್ಯೆ ಇತ್ಯರ್ಥಕ್ಕೆ ನಮಗೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಅನುಭವ ತಿಳಿದುಕೊಳ್ಳಲು ರಾಜ್ಯಮಟ್ಟದ ಸಭೆ ನಡೆಸಲಿರುವುದಾಗಿ ಹೇಳಿದರು.
ಶಾಸಕ ಕೆ.ಬಿ.ಅಶೋಕ ನಾಯ್ಕ್ ಮಾತನಾಡಿ, ಜಿಪಂ ಸದಸ್ಯರಿಗೆ ರಾಜ್ಯ ಸರಕಾರದಿಂದ ವಿವೇಚನಾ ನಿಧಿ ಸ್ಥಾಪಿಸಬೇಕು. ಇದರ ಮೂಲಕ ಪ್ರತಿ ಸದಸ್ಯರಿಗೆ ತಲಾ ೫೦ ಸಾವಿರ ಹಣ ನೀಡಿದರೆ ಅನುಕೂಲವಾಗುತ್ತದೆ. ಈಗಿನ ಜಿಪಂ ಕಾಯಿದೆ ಪ್ರಕಾರ ಅವಿಶ್ವಾಸ ನಿರ್ಣಯಕ್ಕೆ ಅವಕಾಶವಿಲ್ಲ. ಓಟಿಂಗ್ ವ್ಯವಸ್ಥೆ ಇಲ್ಲ. ಅದಕ್ಕಾಗಿ ಕಾಯಿದೆಗೆ ತಿದ್ದುಪಡಿ ತರಬೇಕು ಎಂದರು.
ಜಿಪಂ ಸದಸ್ಯ ಜೆ.ಪಿ.ಯೋಗೇಶ್ ಮಾತನಾಡಿ, ಜಿಲ್ಲಾ ಪಂಚಾಯಿತಿಗೆ ಸರಕಾರ ಅನುದಾನವನ್ನೇ ನೀಡುತ್ತಿಲ್ಲ. ಆದರೆ, ಗ್ರಾಮ ಪಂಚಾಯಿತಿಗಳಿಗೆ ಕೋಟಿಗಟ್ಟಲೆ ಅನುದಾನ ಬರುತ್ತಿದೆ. ಅದಕ್ಕಾಗಿಯೆ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೆ ಎಂದರು.
ವೀರಭದ್ರಪ್ಪ ಪೂಜಾರಿ ಮಾತನಾಡಿ, ತಾಪಂ ವ್ಯವಸ್ಥೆ ಬದಲಾಯಿಸದೆ ಸಶಕ್ತಗೊಳಿಸುವ ಮೂಲಕ ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನ ಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಜಿಪಂ ಸಿಇಒ ಎಂ.ಎಲ್.ವೈಶಾಲಿ ಹಾಗೂ ಸದಸ್ಯರು ಹಾಜರಿದ್ದರು.
previous post
next post