ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಹಾ ಶಿವರಾತ್ರಿ ದಿನ ಆ ಯೋಜನೆ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಗುರುವಾರ ಬೆಳಗ್ಗೆ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದರು.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕೃತಕ ಜಲಪಾತವನ್ನು ನಿರ್ಮಾಣ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ; “ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ ನಡೆಯುತ್ತಿದ್ದು ಹೆಚ್ಚುವರಿಯಾಗಿ ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ ನಿರ್ಮಿಸಲಾಗುವುದು.
ವಾಟರ್ ಫಾಲ್ಸ್ ಜತೆಗೆ ಏರಿಯೇಟರ್ಸ್ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸು ಉದ್ಯಾನವನಗಳಿಂದ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ಒಂದೂವರೆ ಕೋಟಿ ಖರ್ಚಾಗುವ ಅಂದಾಜಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
12ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪುರಕವಾಗಿರಲಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಸ್ಯಾಂಕಿ ಕೆರೆಯು ಮಲ್ಲೇಶ್ವರಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಒಂದು ಮಹತ್ವದ ತಾಣ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಕಾಯಕಲ್ಪ ನೀಡಲಾಗುವುದು. ಪ್ರತಿಯೊಬ್ಬ ಬೆಂಗಳೂರಿಗರೂ ಇಲ್ಲಿಗೆ ಭೇಟಿ ನೀಡಲೇಬೇಕು. ಆ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
ಪಾಲಿಕೆಯ ಮುಖ್ಯ ಎಂಜಿನಿಯರ್ (ಕೆರೆ) ಮೋಹನ್ ಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಪಾಪರೆಡ್ಡಿ, ಸಹಾಯಕ ಎಂಜಿನಿಯರ್ ಗಳಾದ ಸುಷ್ಮಾ, ಸ್ಬಪ್ನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.