Malenadu Mitra
ರಾಜ್ಯ ಶಿವಮೊಗ್ಗ

ಸಮಾಜವಾದಿ ಚಳವಳಿ ಯಶಸ್ಸಿನಲ್ಲಿ ಮಾಧ್ಯಮ ಪಾತ್ರ ದೊಡ್ಡದು

ಮಿಂಚು ಶ್ರೀನಿವಾಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಗೋಡು ಅಭಿಮತ

ಸಮಾಜವಾದಿ ಚಳವಳಿಯಂತಹ ಹೋರಾಟ ಯಶಸ್ವಿಯಾಗಲು ಅಂದು ಜನಪರವಾಗಿದ್ದ ಮಾಧ್ಯಮಗಳ ಪಾತ್ರ ಬಹುದೊಡ್ಡದು ಎಂದು ಸಮಾಜವಾದಿ ನಾಯಕ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್‍ನಲ್ಲಿ ಸಾಕಾರ ಸಂಸ್ಥೆ ಆಶ್ರಯದಲ್ಲಿ ಭಾನುವಾರ ನಡೆದ ಮಿಂಚು ಶ್ರೀನಿವಾಸ್ ಪತ್ರಿಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜವಾದಿ ಚಳವಳಿಯ ಫಲದಿಂದಲೇ ಉಳುವವನು ಹೊಲದೊಡೆಯ ಕಾನೂನು ಬಂದಿತು. ಕಾಗೋಡು ಚಳವಳಿ ನಡೆದಿದ್ದ ನಮ್ಮೂರಿಗೆ ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ಖಾದ್ರಿ ಶಾಮಣ್ಣ ಬರುತ್ತಿದ್ದರು. ಆ ಚಳವಳಿಯಲ್ಲಿ ಸಮಾಜವಾದಿ ನಾಯಕರ ಪ್ರವೇಶದಿಂದ ಐತಿಹಾಸಿಕ ಭೂ ಸುಧಾರಣಾ ಕಾಯಿದೆ ಜಾರಿಗೆ ಬಂದಿತು. ಕಾಗೋಡು ಚಳವಳಿ ಫಲ ಕಾನೂನು ಮಾಡುವಾಗ ನಾನು ಶಾಸನ ಸಭೆ ಸದಸ್ಯನಾಗಿದ್ದು, ಸುದೈವ ಎಂದು ಕಾಗೋಡು ಸ್ಮರಿಸಿದರು.

ಮಿಂಚು ಶ್ರೀನಿವಾಸ್ ನಂಬಿದ ಸಿದ್ಧಾಂತಕ್ಕೆ ಬದ್ಧನಾಗಿ ಕೆಲಸ ಮಾಡಿದ್ದರು. ಅವರ ಪ್ರಭಾವಶಾಲಿ ಬರವಣಿಗೆ ಸಮಾಜವಾದಿ ಹೋರಾಟಕ್ಕೆ ಶಕ್ತಿ ನೀಡಿತ್ತು. ಜನಪರವಾದ ಸಮಾಜವಾದಿ ಚಳವಳಿ ಕಟ್ಟಿದ ಮಹಾನ್ ಪತ್ರಕರ್ತನ ಸ್ಮರಣೆ ಮತ್ತು ಅವರ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷವಾಗಿದೆ. ಅಂದಿನ ಚಳವಳಿ ಎಂಬ ಸೂಜಿಗಲ್ಲು ರಾಷ್ಟ್ರ ಮಟ್ಟದ ನಾಯಕರನ್ನು ಶಿವಮೊಗ್ಗ ಮತ್ತು ಕಾಗೋಡಿಗೆ ಕರೆತಂದಿತ್ತು. ಅದರ ಪ್ರೇರಣೆಯಿಂದ ನಾವೆಲ್ಲ ಸಾರ್ವಜನಿಕ ಕ್ಷೇತ್ರಕ್ಕೆ ಬಂದು ಜನಪ್ರತಿನಿಧಿüಗಳಾದೆವು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಇನ್ನೂ ಶಕ್ತಿ ಇದೆ:
ಉಳುವವನೆ ಹೊಲದೊಡೆಯ ಕಾನೂನು ಶಿವಮೊಗ್ಗದಲ್ಲಿ ಜಾರಿಯಾದಂತೆ ಉಳಿದ ಜಿಲ್ಲೆಗಳಲ್ಲಿ ಜಾರಿಯಾಗಿಲ್ಲ. ಕಂದಾಯ ಸಚಿವನಾಗಿ ನಾನು ಅದನ್ನು ಬಲ್ಲೆ, ಶ್ರಮಿಕ ರೈತರಿಗೆ ಉಳುವ ಭೂಮಿಯ ಹಕ್ಕು ಸಿಗಬೇಕು. ಈ ದಿಸೆಯಲ್ಲಿ ಶಿವಮೊಗ್ಗದಲ್ಲಿ ನಡೆದ ಹೋರಾಟ ಮಾದರಿ. ಈ ಮಣ್ಣಿನಲ್ಲಿ ರಾಜಕೀಯವಾಗಿ ಯಾವುದೇ ಪರಿವರ್ತನೆ ಆದರೂ ಈ ಮಣ್ಣಿನ ಹೋರಾಟದ ಶಕ್ತಿ ಇನ್ನೂ ಇದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.


ಶ್ರೀನಿವಾಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಗಂಗಾಧರ್ ಹಿರೇಗುತ್ತಿ, ಮಿಂಚು ಶ್ರೀನಿವಾಸ್ ಅವರಂತಹ ಧೀಮಂತ ಮತ್ತು ಸಾಮಾಜಿಕ ಕಳಕಳಿಯ ಪತ್ರಕರ್ತನ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿರುವುದು ನನಗೆ ಸಂತೋಷವಾಗಿದೆ. ಶಿವಮೊಗ್ಗ ಎಂದರೆ ಚಳವಳಿ, ಎಂದರ್ಥ ಇಲ್ಲಿನ ನಡೆದ ಕಾಗೋಡು, ಸಮಾಜವಾದಿ, ರೈತ ಚಳವಳಿಗಳಿಂದ ಇಡೀ ದೇಶದಲ್ಲಿ ಸಾಮಾಜಿಕ ಪರಿವರ್ತನೆಗಳಾಗಿವೆ. ಎರಡು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಈ ಜಿಲ್ಲೆಯ ವಾತಾವರಣವೇ ಒಂದು ರೀತಿಯ ಸ್ಫೂರ್ತಿದಾಯ ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಮಿಂಚು ಶ್ರೀನಿವಾಸ್ ಅವರು ತಾವು ನಂಬಿದ ಸಿದ್ಧಾಂತಗಳಿಗೆ ಬದ್ದವಾಗಿದ್ದರು. ಅವರ ಒಡನಾಡಿಗಳು ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಅವರ ಬಳಿ ಸುಳಿಯದೆ ಬರೆದಂತೆ ಬದುಕಿದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಅವರೊಂದು ಅಧ್ಯಯನ ಯೋಗ್ಯ ವ್ಯಕ್ತಿ ಎಂದರು.


ಕಾರ್ಯಕ್ರಮದಲ್ಲಿ ಸಿ.ಆರ್.ಭಟ್ ಸ್ಮರಣಾರ್ಥ ಸಾಮಾಜಿಕ ಮತ್ತು ಸಾಂಸ್ಕøತಿಕ ಪ್ರಶಸ್ತಿಯನ್ನು ಮನೋವೈದ್ಯೆ ಮತ್ತು ಭರತನಾಟ್ಯ ಕಲಾವಿದೆ ಡಾ.ಕೆ.ಎಸ್.ಪವಿತ್ರ, ಪತ್ರಿಕೋದ್ಯಮ ವಿದ್ಯಾರ್ಥಿ ನರಸಿಂಹಮೂರ್ತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕೆಎಸ್‍ಎಸ್‍ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ಡಾ.ಸುಭುದಾ, ಮಿಂಚು ಶ್ರೀನಿವಾಸ್ ಪುತ್ರ ರವಿಕುಮಾರ್ ಮತ್ತು ಕುಟುಂಬದವರು ಹಾಜರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ರವಿಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Ad Widget

Related posts

ಭದ್ರಾವತಿಯಲ್ಲಿ ಕರಡಿ ಭೀಕರ ದಾಳಿ- ಗಾಯಾಳು ಮೆಗ್ಗಾನ್ ಗೆ ದಾಖಲು

Malenadu Mirror Desk

ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಬೇಡ: ರೈತರ ಮನವಿ

Malenadu Mirror Desk

ನಗರ ಸರ್ವತೋಮುಖ ಅಭಿವೃದ್ಧಿಯಾಗಬೇಕು , ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.