ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲವರ್ಧನೆಯಾಗಿ ಬ್ರಹ್ಮಶ್ರಿ ನಾರಾಯಣ ಗುರುಗಳ ಆಶಯದಂತೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ನಿರಂತರವಾಗಿ ಪ್ರೋತ್ಸಾಹಿಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣಗುರು ಜಿಲ್ಲಾ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷ ಗೀತಾಂಜಲಿ ದತ್ತಾತ್ರೇಯ ಹೇಳಿದರು.
ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಮಹಿಳಾ ಸಂಘದ ಹಾಸ್ಟೆಲ್ ಆವರಣದಲ್ಲಿ ಭಾನುವಾರ ಈಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚಾಗಿರುವ ಈಡಿಗ ಸಮಾಜದ ಮಕ್ಕಳು ಹಿಂದೆ ಶಿಕ್ಷಣದಿಂದ ವಂಚಿತರಾಗಿದ್ದರು. ಆದರೆ ಈಗ ಗುರುಗಳ ಸಂದೇಶದಂತೆ ವಿದ್ಯಾವಂತರಾಗುತ್ತಿದ್ದಾರೆ. ಉತ್ತಮ ಅಂಕ ಪಡೆದು ಹೆಮ್ಮೆ ತಂದಿದ್ದಾರೆ. ಈಡಿಗ ಮಹಿಳಾ ಸಂಘವು ಮಕ್ಕಳ ವಿದ್ಯಾಭ್ಯಾಸಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.
ವಿವಿಧ ವಿಭಾಗಗಳಲ್ಲಿನ 71 ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಲ್‍ಗೆ ನೇಮಕಗೊಂಡಿರುವ ಗೀತಾಂಜಲಿ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಂಘದ ಗೌರವ ಅಧ್ಯಕ್ಷೆ ರೀತು ಪೂಜಾರಿ, ಉಪಾಧ್ಯಕ್ಷೆ ಪ್ರೇಮಾ ವಿಜಯೇಂದ್ರ, ಖಜಾಂಚಿ ವೀಣಾ ವೆಂಕಟೇಶ್, ನಿರ್ದೇಶಕರಾದ ಪ್ರಭಾವತಿ ಮಡೆನೂರು, ಪುಷ್ಮಾ ಮೂರ್ತಿ,ಜ್ಯೋತಿ ಸಂಜೀವ, ಜಯಲಕ್ಷ್ಮಿ ಕಲ್ಲನ,ಜಯಶ್ರೀ ಗುರುಮೂರ್ತಿ, ರೇಷ್ಮಾ ಮಡೆನೂರು ಮತ್ತಿತರರಿದ್ದರು.