ಶಾಲಾ ಶಿಕ್ಷಕರು ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರ, ಸಂಸ್ಕೃತಿ, ದಾನ, ಧರ್ಮದ ವಿಚಾರಗಳನ್ನು ಬಿತ್ತುವ ಕಾರ್ಯ ಮಹತ್ವದ್ದು ಎಂದು ಕ್ಯಾಸನೂರು ಸಂಸ್ಥಾನ ಮಠದ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಸೊರಬ ತಾಲೂಕಿನ ಕಡೂರಿನ ಸರಕಾರಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ಸೊರಬ ವತಿಯಿಂದ ಏರ್ಪಡಿಸಿದ್ದ ಜ್ಞಾನ ದೀವಿಗೆ ಕಾರ್ಯಕ್ರಮದಡಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯವರು ವೈಯಕ್ತಿಕ ಜೀವನದ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳ ಜೀವನ ಅರ್ಥಪೂರ್ಣವಾದದ್ದಾಗಿದ್ದು, ಸಂಪೂರ್ಣವಾಗಿ ಕಲಿಕೆಯಲ್ಲಿ ತೊಡಗಿ ಅಸಾಧ್ಯವಾದ್ದನ್ನು ಸಾಧ್ಯವಾಗಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಗಾದ ಜ್ಞಾನ, ಶಕ್ತಿ ಇದ್ದು ಅದನ್ನು ಬಳಸಿಕೊಂಡು ಬೆಳೆದು ನಿಲ್ಲಬೇಕು ಎಂದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಹಾಗೂ ವೈದ್ಯ ಡಾ.ಎಚ್.ಇ.ಜ್ಞಾನೇಶ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರಕಾರ ಟ್ಯಾಬ್ ವಿತರಣೆ ಮಾಡಬೇಕಿತ್ತು. ಆದರೆ ಆ ಕಾರ್ಯಕ್ಕೆ ಸರಕಾರ ಮುಂದಾಗದೆ ರೋಟರಿ ಕ್ಲಬ್ ಒದಗಿಸುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಹೊರಗಿನ ಪರಿಕರಗಳಿಗಿಂತ ಒಳಗೆ ಸಾಧಿಸುವ ಛಲ, ಹಂಬಲ, ಸ್ಪಷ್ಟ ಗುರಿ ಇದ್ದರೆ ಸಾಧನೆ ಸುಲಭ. ಕೀಳರಿಮೆಯನ್ನು ತೊರೆದು ಪರಿಶ್ರಮಕ್ಕೆ ಒತ್ತು ನೀಡಬೇಕು ಎಂದ ಅವರು ಜ್ಞಾನ ಮಾನದಂಡವೇ ಹೊರತು ಅಂಕಗಳಲ್ಲ.
ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಗುತ್ತಿ ಮಾತನಾಡಿ, ಕಡಸೂರು ಗ್ರಾಮದ ಕೃಷಿಕರು ಹಾಗೂ ರೋಟರಿಯನ್ ಶಿವಕುಮಾರ್ ಗೌಡ ಅವರ ಚಿಂತನೆ ಹಾಗೂ ವಿನಂತಿ ಮೇರೆಗೆ ರೋಟರಿ ಸಂಸ್ಥೆಯಿಂದ ಕಡಸೂರು ಸರಕಾರಿ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಲು ಸಾಧ್ಯವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಟಿ.ಆರ್.ಸಂತೋಷ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ರೋಟರಿ ಸಂಸ್ಥೆ ಉಚಿತ ಟ್ಯಾಬ್ ವಿತರಿಸಿದ್ದು ಸದುಪಯೋಗವಾಗಬೇಕು ಎಂದರು.
ಪ್ರಗತಿಪರ ಕೃಷಿಕ ಹಾಗೂ ರೋಟರಿಯನ್ ಶಿವಕುಮಾರ್ ಗೌಡ ಕಡಸೂರು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಹರಿಹರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿಯರಾದ ಪ್ರತಿಮಾ ಸ್ವಾಗತಿಸಿ, ತಲಿತಮ್ಮ ವಂದಿಸಿ, ಶಿವಲೀಲಾ ನಿರೂಪಿಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಗೌಡ, ಕೆರೆಸ್ವಾಮಿಗೌಡ, ಲಕ್ಷ್ಮಿ,ಸಿ.ಎನ್. ಪುಟ್ಟಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಯಶೋಧರ್, ನಿಕಟಪೂರ್ವ ಅಧ್ಯಕ್ಷರಾದ ರಾಜು ಹಿರಿಯಾವಲಿ, ನಾಗರಾಜ್ ಗುತ್ತಿ, ಡಿ.ಎಸ್.ಶಂಕರ್, ಸದಸ್ಯರಾದ ಎಸ್. ರೋಹಿತ್, ಕೃಷ್ಣಪ್ಪ ಓಟೂರು, ಮಂಜುನಾಥ್ ತವನಂದಿ ಇತರರಿದ್ದರು.