ನಿರಾಧಾರ ಸಂಗತಿಗಳನ್ನಿಟ್ಟುಕೊಂಡು ಕುವೆಂಪು ವಿಶ್ವವಿದ್ಯಾನಿಲಯದ ವಿರುದ್ಧ ಆರೋಪ ಮಾಡುವ ಸಂಘಟನೆಗಳ ವಿರುದ್ಧ ವಿವಿ ಕಾನೂನು ಹೋರಾಟ ಮಾಡಲಿದ್ದು, ನಮ್ಮ ಅಧ್ಯಾಪಕರು ಮತ್ತು ಸಿಬ್ಬಂದಿಗಳ ಬೆನ್ನಿಗೆ ನಿಲ್ಲಲಿದ್ದೇವೆ ಎಂದು ಕುಲಪತಿ ಪ್ರೊ.ಬಿ.ವಿ ವೀರಭದ್ರಪ್ಪ ಹೇಳಿದರು.
ವಿವಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿರುವ ಸಂಘಟನೆಗಳು ನಮ್ಮ ಪ್ರೊಫೆಸರ್‍ಗಳು ಮತ್ತು ಸಿಬ್ಬಂದಿ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿದೆ. ಈ ಬಗ್ಗೆ ವಿವಿ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಿದ್ದು, ಕಾನೂನು ಹಾಗೂ ಆಡಳಿತಾತ್ಮಕವಾಗಿ ನಮ್ಮ ಸಿಬ್ಬಂದಿ ಪರ ವಿಶ್ವವಿದ್ಯಾನಿಲಯ ನಿಲ್ಲಲಿದೆ ಎಂದು ಅವರು ಹೇಳಿದರು.
ಶತಮಾನಗಳಷ್ಟು ಹಳೆಯದಾದ ವಿಶ್ವವಿದ್ಯಾನಿಲಯಗಳೊಂದಿಗೆ ಪೈಪೋಟಿ ಮಾಡಿ ರ್ಯಾಂಕಿಂಗ್‍ನಲ್ಲಿ ಇಡೀ ದೇಶದಲ್ಲಿ 73 ಸ್ಥಾನದಲ್ಲಿರುವ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಮಸಿ ಬಳಿಯುವ ಕೆಲಸ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ನಡೆಯುತ್ತಿದೆ. ಈ ಶಕ್ತಿಗಳಿಗೆ ನಾನು ಧಿಕ್ಕಾರ ಹೇಳುತ್ತೇನೆ. ಪರೀಕ್ಷೆ ನಡೆದ ಅರ್ಧ ತಾಸಿನಲ್ಲಿ ಪಲಿತಾಂಶ ಕೊಡುವ ಯಾವುದಾದರೂ ವಿವಿ ಇದ್ದರೆ ಅದು ಕುವೆಂಪು ವಿವಿ ಎಂಬ ಹೆಗ್ಗಳಿಕೆ ಇದೆ. ನಮ್ಮ ಘಟಕ ಕಾಲೇಜುಗಳು ವಿವಿಯ ಎಲ್ಲಾ ಕ್ಯಾಂಪಸ್‍ಗಳಲ್ಲಿಯೂ ಪಾರದರ್ಶಕ ಆಡಳಿತ ಇದೆ. ನುರಿತ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳ ಶ್ರಮದಿಂದ ಇಂದು ವಿಶ್ವವಿದ್ಯಾಲಯ ಒಳ್ಳೆ ಹೆಸರು ಮಾಡಿದೆ. ಈ ಗುಣಮಟ್ಟಕ್ಕೆ ವಿವಿಯನ್ನು ತರುವಲ್ಲಿ 1987 ರಿಂದ ಈವರೆಗೆ ಆಢಳಿತ ನಡೆಸಿದ ಎಲ್ಲರ ಶ್ರಮವಿದೆ ಎಂದು ಕುಲಪತಿ ವಿವರಿಸಿದರು.
ಜೈ ಬೀಮ್ ಕನ್ನಡ ಜಾಗೃತಿ ಮತ್ತು ಎಸ್ಸಿಎಸ್ಟಿ ಅಸಂಘಟಿತ ಕಾರ್ಮಿಕರ ಅಭಿವೃದ್ಧಿ ಸಂಘಟನೆಯು ಇಬ್ಬರು ವಿಶ್ರಾಂತ ಕುಲಪತಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಸತ್ಯಕ್ಕೆ ದೂರವಾದ ಮಾಹಿತಿಗಳನ್ನಿಟ್ಟುಕೊಂಡು ಪೊಲೀಸ್ ಹಾಗೂ ನ್ಯಾಯಾಲಯದ ಮೂಲಕ ದೂರು ಸಲ್ಲಿಸಿದೆ. ಸುಮಾರು 25 ಮಂದಿ ವಿರುದ್ಧ ದೂರು ನೀಡಿದೆ. ಶೈಕ್ಷಣಿಕ ವಾತಾವರಣದಲ್ಲಿ ಪೊಲೀಸ್ ದೂರು ಮತ್ತು ವಿಚಾರಣೆಯಂತಹ ಪ್ರಕರಣಗಳು ಇರುವುದು ಸರಿಯಲ್ಲ. ಸಂಘಟನೆ ಮಾಡಿದ ಆರೋಪಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಆ ರೀತಿಯ ವ್ಯತ್ಯಾಸಗಳು ನಡೆದಿಲ್ಲ. ಪರೀಕ್ಷಾಂಗ ವಿಭಾಗದ ಡಿಜಲೀಕರಣ ಅಚ್ಚುಕಟ್ಟಾಗಿ ನಡೆದಿದೆ. ಕಾಮಗಾರಿ ಮಾಡದೆ ಬಿಲ್ ಪಾವತಿ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ. ಆ ರೀತಿಯ ಯಾವುದೇ ಕಾಮಗಾರಿ ಇಲ್ಲಿ ನಡೆದಿಲ್ಲ, ಈ ರೀತಿಯ ಆರೋಪದ ಹಿಂದೆ ವಿವಿಯ ಘನತೆಗೆ ಚ್ಯುತಿ ತರುವ ಶಕ್ತಿಗಳ ಕೈವಾಡ ಇದೆ ಎಂದು ಪ್ರೊ.ವೀರಭದ್ರಪ್ಪ ಸ್ಪಷ್ಟಪಡಿಸಿದರು.
ಉಳಿದವರಿಗೆ ಮಾದರಿ
2015 ರಲ್ಲಿಯೇ ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಡಿಜಿಟಲೀಕರಣ ನಡೆದಿದೆ. ಎಲ್ಲವೂ ಹಂತಹಂತಾವಾಗಿ ಪೂರ್ಣಗೊಂಡಿವೆ. ವಿವಿಗಳ ಶಿಕ್ಷಣ ಪರಿಷತ್ ಸಭೆಯಲ್ಲಿ ಉಳಿದ ವಿವಿಗಳಿಗೆ ಕುವೆಂಪು ವಿವಿ ಮಾದರಿ ಅನುಸರಿಸಲು ಅಂದಿನ ಉನ್ನತ ಶಿಕ್ಷಣ ಸಚಿವರು ಸೂಚನೆ ನೀಡಿದ್ದರು. ಕುವೆಂಪು ವಿವಿ ಏಳಿಗೆಯಾಗುತ್ತಿದೆ. ಇಲ್ಲಿನ ಶೈಕ್ಷಣಿಕ ವಾತಾವರಣ ಮತ್ತು ಗುಣಮಟ್ಟದ ಮೂಲಭೂತ ಸೌಕರ್ಯ ಸಂಶೋಧನೆ ಹೀಗೆ ಎಲ್ಲದರಲ್ಲೂ ಕ್ವಾಲಿಟಿ ಇರುವ ಸಂಸ್ಥೆ ಮೇಲೆ ಕೆಟ್ಟ ಹೆಸರು ತರುವವರ ವಿರುದ್ಧ ಕಾನೂನು ಕ್ರಮಕ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಮ್ಮೊಳಗೇ ಶತ್ರುಗಳು
ಬಾಹ್ಯ ಸಂಘಟನೆಗಳಿಗೆ ನಮ್ಮೊಳಗಿರುವವರೇ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಕುಲಸಚಿವರೊಂದಿಗೆ ಚರ್ಚಿಸಿ ಸಮಸ್ಯೆಯ ಮೂಲ ಶೋಧನೆಗೆ ತಿಳಿಸಲಾಗಿದೆ. ದಾಖಲೆಗಳನ್ನು ಹೊರಗೆ ಕೊಡುವುದು, ನಿರಾಧಾರ ಸಂಗತಿಗಳ ವೈಭವೀಕರಣ ಇತ್ಯಾದಿ ನಡೆಯುತ್ತಿದೆ ಎಂಬ ಆರೋಪವಿದೆ. ಮುಂದಿನ ದಿನಗಳಲ್ಲಿ ಇವಕ್ಕೆಲ್ಲ ಕಡಿವಾಣ ಹಾಕಲಾಗುವುದು ಎಂದು ಕುಲಪತಿ ವೀರಭದ್ರಪ್ಪ ಹೇಳಿದರು.
ಕೋಚಿಂಗ್ ಸೆಂಟರ್
ಕೊರೊನ ಕಾರಣದಿಂದ ಕುವೆಂಪು ವಿವಿಯಲ್ಲಿ ಆಗಬೇಕಾದ ಕೆಲಸಗಳು ಇನ್ನೂ ಇವೆ. ಮುಂದಿನ ದಿನಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಐಎಎಸ್,ಐಪಿಎಸ್‍ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಲಾಸ್ ಆರಂಭಿಸಬೇಕು. ವಿವಿಯಲ್ಲಿ ಬೇಡಿಕೆಗೆ ತಕ್ಕದಾಗಿ ಹೊಸ ಕೋರ್ಸ್‍ಗಳನ್ನು ಆರಂಭಿಸುವ ಉದ್ದೇಶವಿದೆ. ವಿವಿಯನ್ನು ಕಟ್ಟುವ ಕೆಲಸಕ್ಕೆ ಎಲ್ಲರ ಸಹಕಾರ ಬೇಕು. ಶೈಕ್ಷಣಿವಾಗಿ ಅಭಿವೃದ್ಧಿಯತ್ತ ಹೋಗಬೇಕಾದ ನಮ್ಮ ಮೇಲೆ ಸತ್ಯವಲ್ಲದ ಸಂಗತಿಗಳನ್ನು ಮಾಧ್ಯಮಗಳಿಗೆ ಕೊಡುತ್ತಿರುವುದು ನಮಗೆ ನೋವು ತಂದಿದೆ ಎಂದು ವೀರಭದ್ರಪ್ಪ ಹೇಳಿದರು.