ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಕಾನೂನು ಬಾಹಿರವಾಗಿ ನೇಮಕಗೊಂಡಿರುವ ನಿರ್ದೇಶಕ ಡಾ.ಸಿದ್ದಪ್ಪ ಅವರ ನೇಮಕವನ್ನು ರದ್ದುಪಡಿಸಬೇಕು ಹಾಗೂ ಅವರ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಒತ್ತಾಯಿಸಿದರು.
ಡಾ.ಸಿದ್ದಪ್ಪನವರ ನೇಮಕಾತಿಯೇ ತಪ್ಪಾಗಿದೆ. ವೈದ್ಯಕೀಯ ಕಾಲೇಜಿನ ಬೈಲಾ ನಿಯಮಾವಳಿಗಳನ್ನು ಉಲ್ಲಂಘಿಸಿ ಅವರ ನೇಮಕವಾಗಿದೆ. ಬೈಲಾದ ಪ್ರಕಾರ ನಿರ್ದೇಶಕರ ನೇಮಕಾತಿಯು 58 ವರ್ಷವನ್ನು ಮೀರಿದವರಿಗೆ ನೀಡಬಾರದು. ಆದರೆ ಈಗ ಅವರಿಗೆ 68 ವರ್ಷವಾಗಿದೆ. 10 ವರ್ಷಗಳ ವ್ಯತ್ಯಾಸವಿದ್ದರು ಕೂಡ ಈ ವೃದ್ದರನ್ನು ಸಿಮ್ಸ್‍ಗೆ ತಂದು ಕೂರಿಸಿದ್ದಾದರೂ ಏಕೆ ಎಂಬ ಸಂಶಯ ಬರುತ್ತದೆ ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದ್ದಾರೆ.
ಅವರು ನೇಮಕವಾದ 10 ತಿಂಗಳಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿವೆ. ಇದುವರೆಗೂ ಸುಮಾರು 120 ಕೋಟಿ ರೂ.ಗಳ ಚೆಕ್ಕುಗಳಿಗೆ ಅವರು ಸಹಿ ಹಾಕಿದ್ದಾರೆ. ಇಷ್ಟು ಮೊತ್ತದ ಹಣ ಕಿಕ್‍ಬ್ಯಾಕ್ ತನಿಖೆಗೆ ಯೋಗ್ಯವಾಗಿದೆ. ಡಾ.ಸಿದ್ದಪ್ಪನವರು ಈ ಕಿಕ್‍ಬ್ಯಾಕ್ ಕಾರಣದಿಂದಲೇ ಅವರನ್ನು ಅನಧಿಕೃತವಾಗಿ ನೇಮಕ ಮಾಡಲಾಗಿದೆ ಎಂಬ ಸಂಶಯ ಮೂಡಿಬರುತ್ತಿದೆ. ಇದಷ್ಟೆ ಅಲ್ಲ ಸುಮಾರು 400 ರೂ. ಮುಖಬೆಲೆಯ ಪಿಪಿಇ ಕಿಟ್ ಅನ್ನು 2100 ರೂ.ಗಳಿಗೆ ಖರೀದಿಸಲಾಗಿದೆ. 58 ರೂ.ಬೆಲೆಯ ಎನ್-95 ಮಾಸ್ಕ್ ಗಳನ್ನು 128 ರೂ.ಗಳಿಗೆ ಖರೀದಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಉಪಕರಣ, ಔಷಧಿ ಖರೀದಿ, ಕಟ್ಟಡಗಳ ನಿರ್ಮಾಣದಲ್ಲೂ ಸಹ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ. ಈ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಬೇಕು ಎಂದರು.
ಮೆಡಿಕಲ್ ಕಾಲೇಜಿನಲ್ಲಿ ಲೋಕೋಪಯೋಗಿ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ತಪ್ಪಿಸಿ ಸಿವಿಲ್ ಇಂಜಿನೀಯರ್, ಎಲೆಕ್ಟ್ರಿಕಲ್ ಇಂಜಿನಿಯರ್, ಬಯೊಮೆಡಿಕಲ್ ಇಂಜಿನಿಯರುಗಳನ್ನು ನೇಮಕಮಾಡಿಕೊಂಡಿರುವುದು ಕೂಡ ಗೋಲ್‍ಮಾಲ್ ವ್ಯವಹಾರದ ಭಾಗವೇ ಆಗಿದೆ. ಬಡವರಿಂದ ಚಿಕತ್ಸೆಗಾಗಿ ಪಡೆದ ಹಣವೆ ಸುಮಾರು 7 ಕೋಟಿ ರೂ.ಗಳಷ್ಟು ದುರುಪಯೋಗವಾಗಿದೆ ಎಂದು ಪ್ರಸನ್ನಕುಮಾರ್ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರ ಪ್ರಭಾವ ಈ ಎಲ್ಲದರ ಮೇಲಿದೆ. ಈ ಹಿಂದೆ ಸಿಮ್ಸ್ ನಿರ್ದೇಶಕರಾಗಿದ್ದ ಡಾ.ಲೇಪಾಕ್ಷಿಯವರು ಇರುವ ತನಕ ನಾನು ಸಿಮ್ಸ್‍ಗೆ ಕಾಲಿಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು. ಆದರೆ ಸಚಿವರು ಅಂದು ಯಾಕೆ ಹಾಗೆ ಹೇಳಿದ್ದರೆಂಬ ಮರ್ಮ ಈಗ ಅರಿವಾಗುತ್ತಿದೆ ಎಂದು ದೂರಿದರು.
ಪತ್ರಿಕಾ ಗೋಷ್ಠಿಯಲ್ಲಿ ಯು.ಶಿವಾನಂದ, ಪ್ರವೀಣ್ ಕುಮಾರ್, ದೀಪಕ್‍ಸಿಂಗ್, ಕೆ.ರಂಗನಾಥ್, ರಘು, ಆಸೀಫ್, ಪುಷ್ಪಲತಾ, ಮಂಜುನಾಥ್, ಲಕ್ಷ್ಮಣ ಮತ್ತಿತರರಿದ್ದರು.