ನಾರಾಯಣಗುರು ವಿಚಾರವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಹೇಳಿಕೆ
ಸಂಘಪರಿವಾರದಲ್ಲಿರುವ ಅನೇಕರು ತಮ್ಮ ತಮ್ಮ ಜಾತಿಯ ಸಂಘಟನೆ ಮಾಡುವುದಾದರೆ ಪರಿವಾರದ ಹಿನ್ನೆಲೆಯ ನಾನೇಕೆ ನಮ್ಮ ಈಡಿಗ ಸಮುದಾಯದ ಸಂಘಟನೆ ಮಾಡಬಾರದು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಪ್ರಶ್ನಿಸಿದರು.
ಶಿವಮೊಗ್ಗದ ಆರ್ಯ ಈಡಿಗಭವನದಲ್ಲಿ ಭಾನುವಾರ ನಡೆದ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಂದಾಗಿ ತೆಗೆದುಕೊಂಡು ಹೋಗಬೇಕು. ನಾರಾಯಣಗುರುಗಳ ತತ್ವಾದರ್ಶಗಳ ನೆಲೆಯಲ್ಲಿ ನಮ್ಮ ಹಿಂದುಳಿದ ಈಡಿಗ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ವೇದಿಕೆ ಜನ್ಮತಾಳಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಈಡಿಗ ಸಮುದಾಯದ ಎಲ್ಲ ಉಪ ಪಂಗಡಗಳಲ್ಲಿ ಐಕ್ಯತೆ ಮೂಡಿಸಬೇಕು. ಆ ಮೂಲಕ ಸಂಖ್ಯಾ ದೃಷ್ಟಿಯಿಂದ ಅತ್ಯಂತ ಪ್ರಬಲವಾಗಿರುವ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಬೇಕಾಗಿದೆ. ಎಲ್ಲ ರಂಗದಲ್ಲಿಯೂ ನಮ್ಮವರು ಮುಂದೆ ಬರಬೇಕು ಎಂದು ಹೇಳಿದರು.
ಸಮುದಾಯಕ್ಕೆ ಮಾರ್ಗದರ್ಶನ ಮಾಡಬೇಕಾಗಿರುವ ಸ್ವಾಮೀಜಿಗಳನ್ನು ನಾವು ಮುನ್ನೆಲೆಗೆ ತರಬೇಕಾಗಿದೆ. ಮಠ ಮಾನ್ಯಗಳ ಮೂಲಕ ನಮ್ಮವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ವೇದಿಕೆಯ ಸಂಘಟನೆ ಮತ್ತು ಸಮಾಜದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಪ್ರವಾಸ ಮಾಡುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಡಿಗ ಸಮಾಜದ ಉಪ ಪಂಗಡಗಳಲ್ಲಿನ ಅಂತರ ದೂರು ಮಾಡಿ ಎಲ್ಲರನ್ನೂ ಸಂಘಟಿಸಲು ಸಮಾಜದ ಎಲ್ಲರ ಸಹಕಾರ ಬೇಕು ಎಂದು ಸತ್ಯಜಿತ್ ಹೇಳಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, ಸಣ್ಣ ಸಮಾಜಗಳೂ ಇಂದು ಆರ್ಥಿಕವಾಗಿ ಬಲವಾಗಿವೆ. ಸಂಘಟನೆಯ ಮೂಲಕ ಸರಕಾರದಿಂದ ಸಿಗಬೇಕಾದ ಸೌಲಭ್ಯ ಪಡೆದುಕೊಳ್ಳುತ್ತಿವೆ. ನಮ್ಮಲ್ಲಿ ಗುರುಪೀಠ ಬಲವಾಗಿರದ ಕಾರಣ ಹಿನ್ನಡೆಯಾಗಿದೆ. ಸಮಾಜದ ಸಂಘಟನೆ ವಿಚಾರದಲ್ಲಿ ರಾಜಕೀಯ ಬದಿಗಿಟ್ಟು ಎಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಮಧಗಣಪತಿ ರಾವ್ ಮಡೆನೂರು ಮಾತನಾಡಿ, ಧ್ವನಿಯಿಲ್ಲದವರಿಗೆ ಶಕ್ತಿ ನೀಡಿದವರು ನಾರಾಯಣ ಗುರುಗಳು, ಅವರ ಆದರ್ಶಗಳಿಂದ ಶೂದ್ರ ಶಕ್ತಿಗಳು ಬಲವಾಗಬೇಕು. ಮೇಲ್ವರ್ಗಕ್ಕೆ ಅನ್ನ, ರಕ್ಷಣೆ ಕೊಟ್ಟ ಶೂದ್ರ ಸಮುದಾಯ ಇಂದು ಸಂಘ ನೆಯ ಮೂಲಕ ಎಲ್ಲವನ್ನೂ ಪಡೆಯಲು ಸಾಧ್ಯ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ, ಜನಸಂಖ್ಯೆಯ ದೃಷ್ಟಿಯಿಂದ ಹೆಚ್ಚಿದ್ದರೂ, ನಮ್ಮಲ್ಲಿನ ಉಪ ಪಂಗಡಗಳಲ್ಲಿ ಒಗ್ಗಟ್ಟು ಇಲ್ಲದೆ, ನಮ್ಮ ಶಕ್ತಿ ಕುಂದಿದಂತೆ ಕಾಣುತ್ತದೆ ಮುಂದಿನ ದಿನಗಳಲ್ಲಿ ಹಾಗಾಗಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್ ಮಾತನಾಡಿ, ಸಂಘಟನೆಯ ವಿಚಾರದಲ್ಲಿ ರಾಜಕೀಯ ಮೀರಿದ ಒಗ್ಗಟ್ಟು ನಮ್ಮಲ್ಲಿ ಬರಬೇಕು. ಸತ್ಯಜಿತ್ ಸಾರಥ್ಯದ ವೇದಿಕೆಯ ಬೆನ್ನಿಗೆ ಸದಾ ನಿಲ್ಲುವುದಾಗಿ ಹೇಳಿದರು.
ರಾಜ್ಯ ಈಡಿಗ ಸಂಘದ ಶಿವಮೊಗ್ಗ ಜಿಲ್ಲಾ ಪ್ರತಿನಿಧಿ ಬಿ.ಜಿ.ನಾಗರಾಜ್ ಮಾತನಾಡಿ, ಈಡಿಗ ಸಂಘದೊಳಗೆ ಎಲ್ಲ ಉಪ ಪಂಗಡಗಳು ಸದಸ್ಯತ್ವ ಪಡೆಯಬೇಕು. ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಯ ಬಿಲ್ಲವರು, ನಾಮಧಾರಿಗಳು ಈಡಿಗ ಸಂಘದೊಂದಿಗೆ ಅಂತರ ಕಾಪಾಡಿಕೊಂಡಿವೆ. ಬಿಲ್ಲವ ಸಂಘಟನೆ ಬಲಗೊಳಿಸುವ ಜೊತೆಗೆ ಈಡಿಗ ಸಂಘದಲ್ಲಿ ಸಕ್ರಿಯರಾದರೆ ಸಂಘಟನೆ ಶಕ್ತಿ ಹೆಚ್ಚುತ್ತದೆ ಎಂದರು.
ಉದ್ಯಮಿ ಸುರೇಶ್ ಕೆ.ಬಾಳೆಗುಂಡಿ, ಮಹಿಳಾ ಸಂಘದ ಜಿಲ್ಲಾಧ್ಯಕ್ಷ ಗೀತಾಂಜಲಿ ದತ್ತಾತ್ರೇಯ,ಜಿ,ಡಿ,ಮಂಜುನಾಥ್ ಮಾತನಾಡಿ, ನಾರಾಯಣ ಗುರುಗಳ ಸಂದೇಶದಂತೆ ಈಡಿಗ ಸಮುದಾಯ ಶಿಕ್ಷಣದಿಂದ ಉನ್ನತಿ ಹೊಂದಬೇಕು ಎಂದು ಹೇಳಿದರು.
ನಾಗರಾಜ್ ಗುತ್ತೇದಾರ್, ಅಚ್ಚುತ್ ಕಲ್ಮಾಡಿ, ಶಂಕರ್ ಪೂಜಾರಿ, ಮುಖಂಡರಾದ ಮುಡುಬ ರಾಘವೇಂದ್ರ, ಪ್ರಶಾಂತ್, ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರನಾಯ್ಕ, ಉದ್ಯಮಿ ಬ್ಲೂಮನ್ ಮಹೇಶ್ ಮತ್ತಿತರರಿದ್ದರು. ಸತ್ಯನಾರಾಯಣ ಸ್ವಾಗತಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಇರೇಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ನಿರೂಪಿಸಿದರು. ಪುನೀತ್ ಹೆಬ್ಬೂರು ವಂದಿಸಿದರು.
ಪೂರ್ವಾಪರಕ್ಕೂ ಎಸ್‍ಎನ್‍ಜಿವಿಗೂ ಸಂಬಂಧ ಇಲ್ಲ
ಮೂವತ್ತು ವರ್ಷಗಳ ಕಾಲ ಹಿಂದೂಪರ ಸಂಘಟನೆಯಲ್ಲಿದ್ದೆ ಆದರೆ ಆ ಸಂಘಟನೆಗೂ ನಾರಾಯಣಗುರು ವಿಚಾರ ವೇದಿಕೆಗೂ ಸಂಬಂಧ ಇಲ್ಲ. ಅಲ್ಲಿನ ಸಿದ್ಧಾಂತಗಳನ್ನು ಇಲ್ಲಿ ಹೇರುವುದಿಲ್ಲ. ನಾರಾಯಣಗುರುಗಳ ತತ್ವ ಸಿದ್ಧಾಂತದಡಿಯಲ್ಲಿ ಈ ಸಂಘಟನೆ ನಡೆಯಲಿವೆ. ಹಿಂದೂ ಸಮಾಜ ನಮ್ಮಂತಹ ಸಾವಿರಾರು ಸಣ್ಣ ಸಮುದಾಯಗಳ ಒಂದು ಕೂಟ. ಕೆಳಮಟ್ಟದ ಜಾತಿ, ಸಮುದಾಯಗಳು ಬೆಳೆದಾಗ ಮಾತ್ರ ಹಿಂದೂ ಸಮಾಜಕ್ಕೆ ಶಕ್ತಿ ಬರುತ್ತದೆ. ನಮ್ಮ ಪೂರ್ವಾಪರಕ್ಕೂ ನಾರಾಯಣಗುರು ವಿಚಾರವೇದಿಕೆಗೂ ತಳಕು ಹಾಕುವುದು ಬೇಡ. ಶೇಕಡ 3 ರಷ್ಟಿರುವ ಸಮುದಾಯಕ್ಕೆ ಶೇ.10 ಮೀಸಲಾತಿ ಕೊಡಲಾಗುತ್ತದೆ. ಶೆ.12 ಕ್ಕೂ ಹೆಚ್ಚಿರುವ ಈಡಿಗ ಸಮಾಜಕ್ಕೆ ಒಂದು ನಿಗಮವನ್ನೂ ಸರಕಾರ ರಚನೆ ಮಾಡುವುದಿಲ್ಲ.ಇಂತಹ ತಾರತಮ್ಯಗಳ ವಿರುದ್ಧ ಹೋರಾಟ ಮಾಡುತ್ತಲೇ ನಮ್ಮ ಸಮಾಜದ ಸಂಘಟನೆ ಮಾಡುತ್ತೇನೆ ಎಂದು ಸತ್ಯಜಿತ್ ಹೇಳಿದರು.