Malenadu Mitra
ರಾಜಕೀಯ ರಾಜ್ಯ

ಮತ್ತದೇ ಬೇಸರ…ಮತ್ತದೇ ದೂರು…

ಸಿಎಂ ವಿರುದ್ಧ ಸಿಡಿದ ಈಶ್ವರಪ್ಪ

ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಅವರದೇ ಒಡನಾಡಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತೆ ಬೇಸರಿಸಿಕೊಂಡಿದ್ದಾರೆ. ಪಕ್ಷದ ಹೈಕಮಾಂಡ್‍ಗೆ ಅವರು ದೂರು ಸಲ್ಲಿಸಿದ್ದು, ಈ ಇಬ್ಬರು ನಾಯಕರ ನಡುವಿನ ಭಿನಮತ ಬಹಿರಂಗವಾಗಿದೆ. ಸಿಎಂ ಯಡಿಯೂರಪ್ಪ ಅವರೊಂದಿಗೆ ಯಾವತ್ತೂ ಒಂದು ರೀತಿಯ ಅಂತರ ಕಾಪಾಡಿಕೊಂಡೇ ಬರುತ್ತಿದ್ದ ಈಶ್ವರಪ್ಪ ಅವರು, ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದಲ್ಲದೆ, ಪಕ್ಷದ ಹೈಕಮಾಂಡ್ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಈಶ್ವರಪ್ಪ ಅವರು ನಿರ್ವಹಿಸುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಿರಿಯ ಸಚಿವರಾಗಿರುವ ತಮಗೆ ಇದರಿಂದ ನೋವಾಗಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮೊದಲಾದವರಿಗೆ ಕಳುಹಿಸಿರುವ ಪತ್ರದಲ್ಲಿ ಆರೋಪ ಮಾಡಲಾಗಿದೆ.
ಏನಿದು ಹಸ್ತಕ್ಷೇಪ ?
ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆ ಮಾಡಿರುವ 1200 ಕೋಟಿ.ರೂ. ಅನುದಾನವನ್ನು ನೇರವಾಗಿ ಶಾಸಕರಿಗೆ ಹಂಚಿಕೆ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಕ ಹೋಗಬೇಕಾದ ಅನುದಾನವನ್ನು ಆ ಇಲಾಖೆ ಸಚಿವರನ್ನು ಗಣನೆಗೆ ತೆಗೆದುಕೊಳ್ಳದೆ ಹಂಚಿಕೆ ಮಾಡಿರುವುದರಿಂದ ಈಶ್ವರಪ್ಪ ಕೆಂಡಾಮಂಡಲವಾಗಿ ಸಿಎಂ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅನುದಾನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ಆಪ್ತರಾಗಿರುವ ಸುಮಾರು 32 ಶಾಸಕರಿಗೆ 20 ರಿಂದ23 ಕೋಟಿ ರೂ.ಅನುದಾನ ಹಂಚಿಕೆ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 10 ಕೋಟಿ ರೂ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ತಲಾ 5 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಇಲಾಖೆಯ ಸಚಿವರಿಗೆ ಮಾಹಿತಿಯಿಲ್ಲದೆ ಮಾಡಿರುವ ಈ ಆದೇಶ ಈಶ್ವರಪ್ಪರ ಕೋಪಕ್ಕೆ ಕಾರಣ ಎನ್ನಲಾಗಿದೆ.
ಸಿಎಂಗೆ ಶಾಸಕರ ದೂರು

ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದ ಸುಮಾರು 50 ಕ್ಕೂ ಹೆಚ್ಚು ಶಾಸಕರು ಕೆಲ ಸಚಿವರು ತಮ್ಮನ್ನು ಕಡೆಗಣಿಸುತ್ತಿದ್ದಾರೆ. ತಾವು ಹೇಳಿದ ಕೆಲಸಗಳು ಆಗುತ್ತಿಲ್ಲ, ಅನುದಾನ ಹಂಚಿಕೆ ಹಾಗೂ ಅಧಿಕಾರಿಗಳ ವರ್ಗಾವಣೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾಸಕರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯಡಿಯೂರಪ್ಪ ಅವರು, ಶಾಸಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು. ನಿಮ್ಮ ಯಾವುದೇ ತಕರಾರು ಇದ್ದರೆ ನನ್ನ ಬಳಿ ನೇರವಾಗಿ ಬನ್ನಿ ಎಂಬ ಭರವಸೆಯನ್ನೂ ನೀಡಿದ್ದರು. ದೂರು ಹೇಳಿಕೊಳ್ಳಲು ಬಂದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಮುಖ್ಯಮಂತ್ರಿ ತಮ್ಮ ಬಲ ಪ್ರದರ್ಶನ ಮಾಡಿ ಪಕ್ಷದೊಳಗಿನ ವಿರೋಧಿಗಳಿಗೆ ಒಂದು ಸಂದೇಶ ರವಾನಿಸಿದ್ದರು ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು.
ಸಿಎಂ ಆದೇಶಕ್ಕೆ ಅಡ್ಡಗಾಲು
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ತಮ್ಮ ಗಮನಕ್ಕೆ ತಾರದೆ ಸಿಎಂ ಮಾಡಿರುವ ಆದೇಶದ ಅನುಷ್ಠಾನಕ್ಕೆ ಸಚಿವ ಈಶ್ವರಪ್ಪ ಅಡ್ಡಗಾಲು ಹಾಕಿದ್ದಾರೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್ ಅವರಿಗೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದೆಂದು ಸೂಚನೆ ನೀಡಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅತೀಕ್ ಅವರನ್ನು ಕರೆದು ನನ್ನ ಆದೇಶಕ್ಕೆ ಬೆಲೆ ಇಲ್ಲವೆ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಅಧಿಕಾರಿಗಳು ಸಚಿವ ಈಶ್ವರಪ್ಪ ಅವರ ಆಕ್ಷೇಪವನ್ನು ಸಿಎಂ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಈ ನಡುವೆ ಪಕ್ಷದ ರಾಜ್ಯಉಸ್ತುವಾರಿ ಅರುಣ್ ಸಿಂಗ್, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೂ ಸಚಿವ ಈಶ್ವರಪ್ಪ ಅವರು ದೂರು ನೀಡಿದ್ದು, ಅವರು ಸಿಎಂ ಆದೇಶ ತಡೆಹಿಡಿಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಮನವಿಗೆ ಕಿಮ್ಮತ್ತಿಲ್ಲ
ಈಶ್ವರಪ್ಪ ಅವರು ತಮ್ಮ ಇಲಾಖೆಯ ಗ್ರಾಮೀಣ ಸುಮಾರ್ಗ ಯೋಜನೆಗೆ ಅನುಮೋದನೆ ನೀಡಿ ಎಂದು ಹಲವು ಬಾರಿ ಪತ್ರ ಬರೆದರೂ ಅನುಮೋದನೆ ನೀಡಿಲ್ಲ. ಇಲಾಖೆಯ ಅನುದಾನವನ್ನು ನೇರ ಹಂಚಿಕೆ ಮಾಡುತ್ತಾರೆ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಮ್ಮ ಬೀಗರ ದಾಸರಳ್ಳಿ ಕ್ಷೇತ್ರಕ್ಕೆ 65 ಕೋಟಿ ಅನುದಾನ ನೀಡಲಾಗಿದೆ ಹೀಗೆ ದೂರುಗಳ ಪಟ್ಟಿಯನ್ನೇ ಈಶ್ವರಪ್ಪ ಹೈಕಮಾಂಡ್‍ಗೆ ಕಳಿಸಿದ್ದಾರೆ ಎನ್ನಲಾಗಿದೆ.

ಬೇಸರ ಮೊದಲೇನಲ್ಲ


ರಾಜ್ಯ ಬಿಜೆಪಿ ಶಕ್ತಿಕೇಂದ್ರವಾಗಿರುವ ಶಿವಮೊಗ್ಗದವರೇ ಆದ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ನಡುವಿನ ಭಿನ್ನಮತ ಹೊಸದೇನಲ್ಲ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂಡಾಯ ಶಾಸಕರಿಗೆ ನಾಯಕತ್ವ ನೀಡಿದ್ದು ಕೂಡಾ ಇದೇ ಈಶ್ವರಪ್ಪ. ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಇಬ್ಬರೂ ನಾಯಕರೂ ಹೆಗಲಿಗೆ ಹೆಗಲಾಗಿ ದುಡಿದಿದ್ದರೂ, ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ವಿಮುಖ ನಡೆ ಅನುಸರಿಸುವುದು ಮಾಮೂಲಿಯಾಗಿದೆ. ಹಿಂದಿನ ಯಡಿಯೂರಪ್ಪ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಅವರನ್ನು ಈ ಅವಧಿಯಲ್ಲಿ ಕಡೆಗಣಿಸಲಾಗಿದೆ.. ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮೇಲೆ ಯಡಿಯೂರಪ್ಪ ಬಣದ ಹಿಡಿತ ಅತಿಯಾಗಿದ್ದು, ಈಶ್ವರಪ್ಪ ಅವರನ್ನು ಶಿವಮೊಗ್ಗ ನಗರ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇಲ್ಲಿನ ಎಲ್ಲಾ ಸರಕಾರಿ ನೇಮಕಗಳಲ್ಲಿ ಸಿಎಂ ಮತ್ತವರ ಮಕ್ಕಳ ಪಾತ್ರವೇ ಹೆಚ್ಚಿರುತ್ತದೆ. ಈ ಎಲ್ಲಾ ಕಾರಣಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಸಚಿವ ಈಶ್ವರಪ್ಪ ಹಾಜರಿದ್ದದ್ದೇ ಕಡಿಮೆ.

ಉಸ್ತುವಾರಿಗೆ ಕೊಕ್?

ರಾಜ್ಯದ ಹಲವು ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾಯಿಸುವ ಮಾತುಗಳೂ ಕೇಳಿಬರುತ್ತಿದ್ದು, ತವರು ಜಿಲ್ಲೆಗಳನ್ನು ಯಾವ ಸಚಿವರಿಗೂ ನೀಡುವುದಿಲ್ಲವಂತೆ ಎಂಬ ಸಂದೇಶ ಹರಿದಾಡುತ್ತಿದೆ. ಸಾವಿರಾರು ಕೋಟಿ ರೂ.ಗಳ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಹೊತ್ತಿನಲ್ಲಿ ತಮ್ಮನ್ನು ಶಿವಮೊಗ್ಗದ ಉಸ್ತುವಾರಿಯಿಂದ ತೆಗೆದು ಹಾಕಿದರೆ ಕತೆ ಏನು ಎಂಬ ಆತಂಕವೂ ಈಶ್ವರಪ್ಪ ಅವರು ಹೈಕಮಾಂಡ್‍ಗೆ ನೀಡಿರುವ ದೂರಿನ ಹಿಂದಿದೆ ಎನ್ನಲಾಗಿದೆ. ಇತ್ತೀಚೆಗೆ ಕುರುಬರಿಗೆ ಎಸ್ಸಿ ಮೀಸಲಾತಿ ಕೊಡಿಸಬೇಕೆಂಬ ಬೇಡಿಕೆ ಇಟ್ಟುಕೊಂಡು ಈಶ್ವರಪ್ಪ ನೇತೃತ್ವದಲ್ಲಿ ಮಾಡಿದ್ದ ದೊಡ್ಡ ಆಂದೋಲನ ಕೂಡಾ ಸರಕಾರದ ವಿರುದ್ಧವೇ ಮಾಡಿದ್ದ ಹೋರಾಟ ಎಂದು ಪ್ರತಿಪಕ್ಷಗಳಿಂದ ಬಿಂಬಿತವಾಗಿತ್ತು.

Ad Widget

Related posts

ಯುಜಿಸಿ ಆದೇಶದಂತೆ ಸ್ನಾತಕೋತ್ತರ ಪರೀಕ್ಷೆ ;ಯುವ ಕಾಂಗ್ರೆಸ್ ಆಗ್ರಹ

Malenadu Mirror Desk

ಬಿಜೆಪಿ ಪದಾಧಿಕಾರಿಗಳ ನೂತನ ಪಟ್ಟಿ ಬಿಡುಗಡೆ

Malenadu Mirror Desk

ಕೌಟುಂಬಿಕ ಕಲಹ ಹೆಚ್ಚಿಸಿದ ಕೊರೊನ!

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.