Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಸಿಗಂದೂರು ದೇವಾಲಯ ಸುತ್ತಲ ಜಾಗ ತೆರವು

ನ್ಯಾಯಾಲಯದ ಆದೇಶದಂತೆ ತಹಸೀಲ್ದಾರ್ ಕ್ರಮ
ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶದಂತೆ ದೇವಾಲಯದ ಹೊರವಲಯದ ಭೂಮಿಯನ್ನು ಸರಕಾರ ತೆರವುಗೊಳಿಸಿದೆ.
ಗುರುವಾರ ಸಾಗರ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ನೇತೃತ್ವದ ಕಂದಾಯ ಇಲಾಖೆ ತಂಡ ಹೈಕೋರ್ಟ್ ಆದೇಶದಂತೆ ದೇವಸ್ಥಾನದ ಸ್ವತ್ತುಗಳಿರುವ 6 ಎಕರೆ 16 ಗುಂಟೆ ಜಾಗವನ್ನು ಹೊರತುಪಡಿಸಿ ಉಳಿದ ಜಾಗಕ್ಕೆ ಬೇಲಿ ಹಾಕಿದೆ. ಸಿಗಂದೂರು ದೇವಾಲಯದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಬೇಕೆಂದು ತುಮರಿಯರೇ ಆದ ಲಕ್ಷ್ಮಿನಾರಾಯಣ, ಶಿವರಾಜ್ ಹಾಗೂ ಗೋವರ್ಧನ ಎನ್ನುವವರು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮುಖ್ಯನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ದೇವಸ್ಥಾನದ ಕಟ್ಟಡಗಳಿರುವ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಸರಕಾರದ ವಶಕ್ಕೆ ಪಡೆಯಬೇಕೆಂಬ ಆದೇಶ ನೀಡಿತ್ತು.


ಈ ಆದೇಶದನ್ವಯ ಈ ಹಿಂದೆಯೇ ಸರ್ವೆ ಮಾಡಿದಂತೆ ದೇಗುಲದ ಎಲ್ಲಾ ಮೂಲ ಸೌಕರ್ಯಗಳನ್ನು ಹಾಗೆಯೇ ಬಿಟ್ಟು ಹೆಚ್ಚುವರಿಯಾಗಿ ಇದ್ದ ಭೂಮಿಯನ್ನು ಗುರುತಿಸಿ ಬೇಲಿ ಹಾಕಿಸಲಾಗಿದೆ. ದೇವಸ್ಥಾನದ ಐದು ಕಟ್ಟಡಗಳೂ ತೆರವು ಗೊಳಿಸಬೇಕಾದ ಜಾಗದಲ್ಲಿ ಬರಲಿದ್ದು, ಎಲ್ಲವನ್ನೂ ಗುರುತಿಸಲಾಗಿದೆ. ಇದರಲ್ಲಿ ದೇವಾಲಯದ ಸಿಬ್ಬಂದಿ ವಸತಿಗೃಹಗಳು, ಹೋಟೆಲ್ ಕಟ್ಟಡಗಳು ಸೇರಿವೆ.

ಅರ್ಚಕರ ಮನೆ:

ದೇವಸ್ಥಾನದ ಅರ್ಚಕರು ದೇಗುಲದ ಮುಂಬಾಗ ಅಂಗಡಿ, ಹೋಟೆಲ್‍ಗಳನ್ನು ತೆರವು ಮಾಡಿ ಬೃಹತ್ ಕಾಂಪೌಂಡ್ ಹಾಕಿದ್ದರಿಂದಲೇ ಮೊದಲು ವಿವಾದದ ಕಿಡಿ ಹೊತ್ತಿತ್ತು. ಈಗ ನ್ಯಾಯಲಯದ ಆದೇಶದಂತೆ ಅರ್ಚಕರ ಮನೆ, ಕೊಟ್ಟಿಗೆ ಸೇರಿದಂತೆ 28 ಗುಂಟೆ ಪ್ರದೇಶವೂ ಸರಕಾರ ತೆರವು ಮಾಡಲಿರುವ ಪ್ರದೇಶದಲ್ಲಿಯೇ ಬರಲಿದೆ. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಸ್ಥಳದಲ್ಲಿದ್ದು, ನ್ಯಾಯಾಲಯದ ಆದೇಶ ಜಾರಿಗೆ ಸ್ವಯಂ ಪ್ರೇರಣೆಯಿಂದ ಸಹಕರಿಸಿದ್ದಾರೆ. ದೇವಸ್ಥಾನದ ಅರ್ಚಕರು ಮತ್ತು ಆಡಳಿತಮಂಡಳಿ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಮಧ್ಯಪ್ರವೇಶ ಮಾಡಿದ್ದ ಸರಕಾರ ದೇವಸ್ಥಾನಕ್ಕೆ ಸಲಹಾ ಸಮಿತಿ ರಚನೆ ಮಾಡಿತ್ತು. ಸಮಿತಿ ನೇಮಕ ಪ್ರಶ್ನಿಸಿ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ನ್ಯಾಯಾಯಲದ ಮೆಟ್ಟಿಲೇರಿತ್ತು. ಆ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಈ ನಡುವೆ ತುಮರಿ ಭಾಗದ ಮೂವರು ವ್ಯಕ್ತಿಗಳು ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಧಾರ್ಮಿಕ ಕಾರ್ಯಗಳು ಅಬಾಧಿತ

ಸಿಗಂದೂರು ದೇವಾಲಯದಲ್ಲಿ ಕೋವಿಡ್ ನಿಯಮಗಳಿಗೊಳಪಟ್ಟು ಧಾರ್ಮಿಕ ವಿಧಿವಿಧಾನಗಳು ನಿತ್ಯವೂ ನಡೆಯುತ್ತಿದ್ದು, ಭಕ್ತರಿಗೆ ಯಾವುದೇ ಅಡಚಣೆ ಇಲ್ಲ. ದೇವಾಲಯದ ಕಟ್ಟಡಗಳು, ವಸತಿಗೃಹ, ಸ್ವಾನಗೃಹ ಹಾಗೂ ಭೋಜನಾಲಯಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಗುಲದ ಸ್ವತ್ತುಗಳಿರುವ ಜಾಗವನ್ನು ಹೊರತುಪಡಿಸಿ ಉಳಿದ ಜಾಗಕ್ಕೆ ಮಾತ್ರ ಸರಕಾರ ಬೇಲಿ ಹಾಕಿದೆ.

ಮಾನ್ಯ ಉಚ್ಛನ್ಯಾಯಾಲಯದ ಅದೇಶದಂತೆ ಏಪ್ರಿಲ್ 1 ರಂದು ಸಿಗಂದೂರು ದೇವಾಲಯದ ಸ್ವತ್ತುಗಳಿರುವ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಸರಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆ ಮಾಡಲಾಗಿದೆ. ಆದೇಶ ಅನುಷ್ಠಾನ ವರದಿಯನ್ನು ಹೈಕೋರ್ಟಿಗೆ ಸಲ್ಲಿಸಲಾಗುವುದು
ಚಂದ್ರಶೇಖರ ನಾಯ್ಕ್, ತಹಶೀಲ್ದಾರ್ , ಸಾಗರ

Ad Widget

Related posts

ಅನುಕಂಪದ ಅಲೆಯಲ್ಲಿ ಕಿಮ್ಮನೆ, ಅಧಿಕಾರದ ಪ್ರಭಾವಳಿಯಲ್ಲಿ ಆರಗ, ಬುದ್ದಿವಂತರ ಮತಕ್ಷೇತ್ರದಲ್ಲಿ ಕುತೂಹಲ ಘಟ್ಟದಲ್ಲಿ ರಣಕಣ

Malenadu Mirror Desk

ನೆಚ್ಚಿನ ಅಧಿಕಾರಿ ವರ್ಗಾವಣೆ, ಜೈಲು ಆವರಣದಲ್ಲೊಂದು ಭಾವುಕ ಕ್ಷಣ

Malenadu Mirror Desk

ಕಾಗೋಡು ಚಳವಳಿ ವರ್ಷಾಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.