ರಾಜ್ಯಪಾಲರಿಗೆ ಬರೆದ ಪತ್ರ ಹಿಡಿದುಕೊಂಡು ರಾಜಕಾರಣ ಮಾಡಲು ಹೋದರೆ ಕಾಂಗ್ರೆಸ್‍ನವರಿಗೆ ಏನೂ ಸಿಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಬುಡಮಟ್ಟದ ಸಂಪರ್ಕ ಹಾಗೂ ಕೆಲಸ ನೋಡಿ ನಿರಾಶರಾಗಿರುವ ಸಿದ್ದರಾಮಯ್ಯ ಅವರು, ನಾನು ರಾಜ್ಯಪಾಲರಿಗೆ ಬರೆದ ಪತ್ರ ಇಟ್ಟುಕೊಂಡು ಲಾಭ ಮಾಡಬಹುದು ಎಂದುಕೊಂಡಿದ್ದರೆ ಅದು ಭ್ರಮೆ. ಸರಕಾರದ ಆಡಳಿತಾತ್ಮಕ ವಿಚಾರಗಳನ್ನು ನಾನು ಪ್ರಸ್ತಾಪ ಮಾಡಿದ್ದೇನೆಯೇ ಹೊರತೂ, ಪಕ್ಷದೊಳಗೆ ಯಾವುದೇ ಗೊಂದಲ ಇಲ್ಲ.ಈ ವಿಚಾರದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಹಗಲು ಕನಸು ಕಾಣುವುದನ್ನು ಬಿಡಲಿ ಎಂದು ಹೇಳಿದರು.
ನಾನು ಒಬ್ಬೊಂಟಿಯಲ್ಲ
ಸರಕಾರದ ಆಡಳಿತಾತ್ಮಕವಿಚಾರದಲ್ಲಿ ನೋವು ತೋಡಿಕೊಂಡಿದ್ದೆ. ಪಕ್ಷದ ರಾಜ್ಯಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಎಲ್ಲವನ್ನೂ ಸರಿ ಮಾಡುವುದಾಗಿ ಹೇಳಿದ್ದಾರೆ. ಅವರ ಸಲಹೆಯಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನ ಹಂಚಿಕೆ ಪ್ರಕ್ರಿಯೆ ತಡೆಹಿಡಿಯಲಾಗಿದೆ. ಇದರ ನಡುವೆ ಕೆಲ ಸಚಿವರು ಪತ್ರಿಕಾಗೋಷ್ಠಿ ಮಾಡಿದ್ದರು. ಆದರೆ ಆ ಬಳಿಕ ನೀವು ಎತ್ತಿರುವ ಪ್ರಶ್ನೆ ಸರಿ ಇದೆ ಎಂದಿದ್ದಾರೆ. ಪಕ್ಷದಲ್ಲಿ ನಾನು ಒಬ್ಬೊಂಟಿಯಲ್ಲ. ಅನೇಕರು ದೂರವಾಣಿ ಕರೆ ಮಾಡಿ ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ. ಸರಕಾರದಲ್ಲಿ ಸಚಿವರಿಗೆ ಮುಕ್ತ ಅವಕಾಶ ಇರಬೇಕೆಂಬ ವಿಚಾರಕ್ಕೆ ಎಲ್ಲರ ಸಹಕಾರವಿದೆ ಇದು ಸರಿಯಾಗಲಿದೆ ಎಂದು ಹೇಳಿದರು.