ನರ್ಸಿಂಗ್ ಕೋರ್ಸ್ ಕೊಡಿಸುವುದಾಗಿ ತಲಾ ಒಂದೂವರೆ ಲಕ್ಷ ರೂ. ಹಣ ಪೀಕಿದ ಏಜೆಂಟ್ ವಿರುದ್ಧ ಪಶ್ಚಿಮ ಬಂಗಾಳದ 31 ವಿದ್ಯಾರ್ಥಿನಿಯರು ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಹೊಂದಿರುವ 31 ವಿದ್ಯಾರ್ಥಿಗಳು ಹಾಲ್ ಟಿಕೆಟ್ ವಿಳಂಬವಾಗಿದ್ದರಿಂದ ಸೋಮವಾರ ಅರ್ಧ ತಾಸು ತಡವಾಗಿ ಪರೀಕ್ಷೆ ಬರೆದಿದ್ದಾರೆ. ಮಂಗಳವಾರ ಪರೀಕ್ಷೆ ಬರೆಯುವುದನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರಿಗೆ ಏಜೆಂಟ್‍ಒಬ್ಬರ ಕರಾಮತ್ತು ಗೊತ್ತಾಗಿದೆ.
ಮಾನ್ಯತೆ ಇಲ್ಲದ ಬೇರೊಂದು ಕಾಲೇಜಿನಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಯರಿಗೆ ಶಿವಮೊಗ್ಗದಲ್ಲಿ ಪರೀಕ್ಷಾ ಕೇಂದ್ರ ಕೊಡಿಸಲಾಗಿತ್ತು. ಈ ವೇಳೆ ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶವಿದೆ. ಈ ಎಲ್ಲಾ ವ್ಯವಸ್ಥೆ ಮಾಡಿಸುವುದಾಗಿ ಹೇಳಿ ಏಜೆಂಟ್ ಹಣ ಪೀಕಿದ್ದ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸುಬ್ಬಯ್ಯ ನರ್ಸಿಂಗ್ ಕಾಲೇಜಿನ ಆಡಳಿಮಂಡಳಿಯು, ವಿದ್ಯಾರ್ಥಿಗಳು ಪರೀಕ್ಷೆ ಮಾತ್ರ ಇಲ್ಲಿ ತೆಗೆದುಕೊಂಡಿದ್ದಾರೆ. ಅವರ ಉಳಿದ ಸಂಗತಿಗೂ ಆಡಳಿತ ಮಂಡಳಿಗೂ ಸಂಬಂಧವಿಲ್ಲ ಎಂದು ಹೇಳಿದೆ.