ಕಾಗೋಡು ರೈತ ಚಳವಳಿ ಸಂಸ್ಮರಣಾ ಸಮಿತಿ ಮತ್ತು ಡಾ. ರಾಮಮನೋಹರ ಲೋಹಿಯಾ ಟ್ರಸ್ಟ್ ಆಶ್ರಯದಲ್ಲಿ ಕಾಗೋಡು ರೈತ ಸತ್ಯಾಗ್ರಹ 70ನೇ ವರ್ಷಾಚರಣೆ ಸವಿನೆನಪಿನಲ್ಲಿ `ರೈತ ಚಳವಳಿ-ರಾಜಕಾರಣ ಮುಂದಣ ಹೆಜ್ಜೆ’ ಕಾರ್ಯಕ್ರಮ ಏ. 18ರಂದು ಬೆಳಿಗ್ಗೆ 11 ರಿಂದ ಸಾಗರ ಕಾಗೋಡು ತಿಮ್ಮಪ್ಪ ರಂಗಮಂದಿರದ ಆವರಣದಲ್ಲಿರುವ ಕಾಗೋಡು ಸತ್ಯಾಗ್ರಹಿ ಕಣಸೆ ಜಟ್ಟಪ್ಪ ನಾಯ್ಕ’ ವೇದಿಕೆಯಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಗೋಡು ಸತ್ಯಾಗ್ರಹ ಉಳುಮೆ ಮಾಡುವ ಗೇಣಿ ರೈತನ ಆತ್ಮಾಭಿಮಾನದ ಸಂಕೇತವಾಗಿ ನಡೆದಿತ್ತು. ಅಂದು ಗೇಣಿ ರೈತರಿಗೆ ಭೂಮಿ ಕೊಡಲು ನಡೆಸಿದ ಹೋರಾಟ ಸ್ಮರಣಾರ್ಹವಾದದ್ದು. ಆದರೆ ಅಂದಿನ ಹೋರಾಟದ ಕಿಚ್ಚು ಇಂದಿನವರಲ್ಲಿ ಕಾಣುವುದು ಅಪರೂಪ ಎಂದರು.
ಕಾಗೋಡು ಚಳುವಳಿ ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯಕರ್ತವ್ಯ. ಕಾಗೋಡು ರೈತ ಚಳುವಳಿ ಸ್ಮರಣೆ ಮಾಡಿಕೊಳ್ಳುವ ಜೊತೆಗೆ ಪ್ರಸ್ತುತ ಸಂದರ್ಭದಲ್ಲಿ ರೈತರ ಮುಂದಿರುವ ಸವಾಲುಗಳ ಕುರಿತು ಚಿಂತನಮಂಥನ ಮಾಡುವ ಉದ್ದೇಶದಿಂದ ವಿಚಾರ ಮಂಥನ ಆಯೋಜಿಸಲಾಗಿದೆ. ಇಂದಿನ ದಿನಮಾನಗಳಲ್ಲಿ ರೈತರ ಎದುರು ನೂರಾರು ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳಿಗೆ ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳುವ ಸಂದಿಗ್ದತೆ ಸಹ ಸೃಷ್ಟಿಯಾಗಿದೆ. ಈ ಕಾರ್ಯಕ್ರಮ ರೈತ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ವೇದಿಕೆಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ಶಿವಾನಂದ ಕುಗ್ವೆ ಮಾತನಾಡಿ, ಕಾರ್ಯಕ್ರಮಕ್ಕೆ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ರೈತ ನಾಯಕ ಪ್ರೊ. ಯೋಗೇಂದ್ರ ಯಾದವ್ ಚಾಲನೆ ನೀಡಲಿದ್ದಾರೆ. ಹಿರಿಯ ಸಮಾಜವಾದಿ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಶಯ ಮಾತುಗಳನ್ನಾಡಲಿದ್ದಾರೆ. ರೈತ ಸಂಘದ ಬಾಬಾಗೌಡ ಪಾಟೀಲ್, ಕೋಡಿಹಳ್ಳಿ ಚಂದ್ರಶೇಖರ್, ಪ್ರಮುಖರಾದ ಬಿ.ಆರ್.ಪಾಟೀಲ್, ಎಸ್.ಆರ್.ಹಿರೇಮಠ್, ಡಾ. ನಾ.ಡಿಸೋಜ, ಡಾ. ರಾಜನಂದಿನಿ ಕಾಗೋಡು, ತೇಜಸ್ವಿ ಪಟೇಲ್ ಮತ್ತಿತರರು ಭಾಗವಹಿಸುವರು ಎಂದರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಕಾಗೋಡು ತಿಮ್ಮಪ್ಪ ಉಪಸ್ಥಿತರಿರುವರು. ಹಿರಿಯ ಸಮಾಜವಾದಿ ಬಿ.ಆರ್.ಜಯಂತ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಕಿಮ್ಮನೆ ರತ್ನಾಕರ್, ಪ್ರಕಾಶ್ ಕಮ್ಮರಡಿ, ಬಿ.ಆರ್.ಯಾವಗಲ್, ಶಾಸಕ ಸಂಗಮೇಶ್, ಪ್ರಫುಲ್ಲಾ ಮಧುಕರ್, ಗೋಪಾಲಕೃಷ್ಣ ಬೇಳೂರು, ಆರ್. ಪಸ್ನನಕುಮಾರ್ ಇನ್ನಿತರರು ಉಪಸ್ಥಿತರಿರುವರು ಎಂದು ಹೇಳಿದರು.
ಇನ್ನೋರ್ವ ಸಂಚಾಲಕ ಎನ್.ಡಿ.ವಸಂತಕುಮಾರ್, ರೈತ ಸಂಘದ ಮಂಜಪ್ಪ ಹಿರೇನೆಲ್ಲೂರು, ಕನ್ನಪ್ಪ, ರಮೇಶ್ ಐಗಿನಬೈಲ್ ಇದ್ದರು.