ಸಾಗರ : ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ರಥೋತ್ಸವವು ಏಪ್ರಿಲ್ 16ಕ್ಕೆ ಸರಳವಾಗಿ ನಡೆಯಲಿದ್ದು, ರಥೋತ್ಸವಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಕೇವಲ 10 ಮೀಟರ್ ದೂರ ಮಾತ್ರ ರಥ ಎಳೆಯಲಿದ್ದು, ಪುರೋಹಿತ ವರ್ಗ, ತಾಂತ್ರಿಕರನ್ನು ಹೊರತುಪಡಿಸಿ ಐದು ಸೀಮೆಯ ಭಕ್ತರು, ಸ್ವಯಂಸೇವಕರು ಸೇರಿದಂತೆ 50 ಜನರು ಮಾತ್ರ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏಪ್ರಿಲ್ 16ರಂದು ನಡೆಯಲಿರುವ ಮಹಾಗಣಪತಿ ರಥೋತ್ಸವ ಅಂಗವಾಗಿ ಕರೆಯಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಜಾತ್ರೆ ಇರುವುದಿಲ್ಲ. ಗುಂಪು ಸೇರುವಂತೆ ಇರುವುದಿಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್. ಮಾತನಾಡಿ, ರಥೋತ್ಸವ ನಡೆಯುವ ಸುತ್ತಲೂ ಬ್ಯಾರಿಕೇಡ್ ಹಾಕಲಾಗುತ್ತಿದ್ದು, ಜನ ಸೇರದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ರಥರೋಹಣ ಮತ್ತು ರಥ ಎಳೆದ ನಂತರ ಭಕ್ತಾದಿಗಳು ಕೋವಿಡ್ ನಿಯಮ ಪಾಲಿಸಿ ದೇವರ ದರ್ಶನ ಮಾಡಬಹುದು. ಕಳೆದ ವರ್ಷ ಕೊರೋನಾ ಹಿನ್ನೆಲೆಯಲ್ಲಿ ರಥೋತ್ಸವವನ್ನು ನಿಷೇದ ಮಾಡಲಾಗಿತ್ತು. ಈ ವರ್ಷ ಭಕ್ತಾದಿಗಳ ಕೋರಿಕೆ ಮೇರೆಗೆ ಸರಳವಾಗಿ ರಥೋತ್ಸವ ನಡೆಸಲಾಗುತ್ತಿದೆ ಎಂದರು.
ರಥೋತ್ಸವ ಸರಳವಾಗಿ ನಡೆದರೂ ಎಲ್ಲ ಧಾರ್ಮಿಕ ಪದ್ದತಿಗಳು ಅನೂಚಾನವಾಗಿ ನಡೆದುಕೊಂಡು ಬಂದಂತೆ ನಡೆಯಲಿದೆ. ಹಣ್ಣುಕಾಯಿ ಒಡೆಯಲು, ಅಂಗಡಿ ಮುಂಗಟ್ಟುಗಳನ್ನು ಹಾಕಲು ಅವಕಾಶ ಇರುವುದಿಲ್ಲ. ಯಾರು ರಥೋತ್ಸವ ಸಂದರ್ಭದಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿ ನಿರ್ಧರಿಸಲಿದೆ. ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ, ಕೋವಿಡ್ ನಿಯಮಕ್ಕೆ ಚ್ಯುತಿ ಬಾರದಂತೆ ರಥೋತ್ಸವ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಡಿ.ವೈ.ಎಸ್.ಪಿ. ವಿನಾಯಕ ಎನ್. ಶೆಟಿಗೇರ್, ದೇವಸ್ಥಾನದ ಆಡಳಿತಾಧಿಕಾರಿ ರಂಗಣ್ಣ, ಪ್ರಮುಖರಾದ ಟಿ.ಡಿ.ಮೇಘರಾಜ್, ಐ.ವಿ.ಹೆಗಡೆ, ರವೀಶ್ ಕುಮಾರ್, ಲಕ್ಷ್ಮಣ್ ಜೋಯ್ಸ್, ನವೀನ್ ಜೋಯ್ಸ್, ಭಾವನಾ ಸಂತೋಷ್, ಸತೀಶ್ ಕೆ., ಅರುಣ ಘಾಟೆ, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.