ಕೋವಿಡ್ ಹಿನ್ನೆಲೆಯಲ್ಲಿ ರಂಜಾನ್ ಆಚರಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ತಿಳಿಸಿದ್ದಾರೆ.
ಕಂಟೈನ್‍ಮೆಂಟ್ ವಲಯದಲ್ಲಿ ಬರುವ ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳನ್ನು ಸಾರ್ವಜನಿಕರಿಗೆ ತೆರೆಯಬಾರದು. 60ವರ್ಷ ಮೇಲ್ಪಟ್ಟವರು, ತೀವ್ರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, 10ವರ್ಷದೊಳಗಿನ ಮಕ್ಕಳು ಮನೆಯಲ್ಲಿರಬೇಕು. ಗುಂಪು ಸೇರಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತಕ ಕಾಯ್ದುಕೊಳ್ಳಲು ಮಸೀದಿಯಲ್ಲಿ ಬಣ್ಣದಿಂದ ಗುರುತು ಮಾಡಬೇಕು. ಅಗತ್ಯವಿದ್ದರೆ ಪಾಳಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಆಜಾನ್ ಆರಂಭದ 5ನಿಮಿಷ ಮೊದಲು ಮಸೀದಿಯನ್ನು ತೆರೆಯಬೇಕು ಮತ್ತು ಕಡ್ಡಾಯ ನಮಾಝ್ ಮುಗಿದ ತಕ್ಷಣ ಮಸೀದಿಯನ್ನು ಮುಚ್ಚಬೇಕು ಎಂದು ಅವರು ಹೇಳಿದ್ದಾರೆ.
ಪ್ರಾರ್ಥನೆಗೆ ಅಗತ್ಯವಿರುವ ಮ್ಯಾಟ್, ಟೊಪ್ಪಿ ಇತ್ಯಾದಿಗಳನ್ನು ಮನೆಯಿಂದಲೇ ತರಬೇಕು. ಇಫ್ತಾರ್ ಕೂಟವನ್ನು ಮಸೀದಿಯಲ್ಲಿ ಆಯೋಜಿಸದೆ ಮನೆಯಲ್ಲಿಯೇ ಉಪವಾಸ ತೊರೆದು ಕೇವಲ ಪ್ರಾರ್ಥನೆಗಾಗಿ ಮಾತ್ರ ಮಸೀದಿಗೆ ಬರಬೇಕು. ಪ್ರತಿ ಪ್ರಾರ್ಥನೆ ಬಳಿಕ ಮಸೀದಿಯನ್ನು ಸ್ವಚ್ಛಗೊಳಿಸಿ ಡಿಸ್ ಇನ್‍ಫೆಕ್ಷನ್ ಮಾಡಬೇಕು. ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಮಸೀದಿಯಲ್ಲಿ ಫಲಕಗಳನ್ನು ಅಳವಡಿಸಬೇಕು. ಪ್ರತಿ ಮಸೀದಿಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯನ್ನು ಖಾತ್ರಿಪಡಿಸಲು ಪಾಲನಾ ಸಮಿತಿಗಳನ್ನು ರಚಿಸಬೇಕು ಮತ್ತು ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.