ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳು, ಮಾನವ ಸಂಪನ್ಮೂಲ ಹಾಗೂ ಹಣಕಾಸು ವ್ಯವಸ್ಥೆ ಕಲ್ಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶನಿವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಎದುರಿಸಲು ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೆಗ್ಗಾನ್‍ಗೆ ಹೆಚ್ಚುವರಿಯಾಗಿ ಅಗತ್ಯವಿರುವ 50 ನರ್ಸ್‍ಗಳು ಹಾಗೂ ಡಿ ಗ್ರೂಪ್ ನೌಕರರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಇರುವ ಆಕ್ಸಿಜನ್ ಬೆಡ್‍ಗಳ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಅನುದಾನವನ್ನು ಎಸ್‍ಡಿಆರ್‍ಎಫ್ ಅಡಿಯಲ್ಲಿ ಪಡೆದುಕೊಳ್ಳುವ ಕುರಿತು ಪ್ರಯತ್ನಿಸಲಾಗುತ್ತಿದೆ. ಮೆಗ್ಗಾನ್‍ಗೆ ಪಾಲಿಕೆಯಿಂದ ಹೆಚ್ಚುವರಿಯಾಗಿ ಅಂಬುಲೆನ್ಸ್ ನೀಡಲು ಸೂಚನೆ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಕಳೆದ ಸೆಪ್ಟಂಬರ್‍ನಲ್ಲಿ ಕೊರೊನ ಅತ್ಯಂತ ಹೆಚ್ಚಾಗಿದ್ದ ಸಂದರ್ಭದಲ್ಲಿ ರಚಿಸಲಾಗಿದ್ದ ವೈದ್ಯಕೀಯ ತಂಡಗಳನ್ನೇ ಈಗಲೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕಳೆದ ಬಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕರೋನಾ ಸೋಂಕಿತರ ಪ್ರಾಥಮಿಕ ತಪಾಸಣೆ ನಡೆಸಲಾಗುತ್ತಿತ್ತು. ಪ್ರಸ್ತುತ ಮೆಗ್ಗಾನ್‍ನಲ್ಲಿ ಮಾಡಲಾಗುತ್ತಿದ್ದು, ಇದನ್ನು 24×7 ಮಾಡಲಾಗುವುದು. ಮೆಗ್ಗಾನ್‍ನಲ್ಲಿ ಚಿಕಿತ್ಸೆ ಅಗತ್ಯವಿದ್ದವರನ್ನು ಮಾತ್ರ ದಾಖಲು ಮಾಡಿ ಉಳಿದವರನ್ನು ಹೋಂ ಐಸೋಲೇಷನ್ ಮಾಡಲಾಗುವುದು. ಅಗತ್ಯ ಬಿದ್ದರೆ ಕೊರೊನ ಕೇರ್ ಸೆಂಟರ್ ಆರಂಭಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಸಹ ಕೊರೊನ ಪೀಡಿತರನ್ನು ದಾಖಲು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಪ್ರಸ್ತುತ ಮೆಗ್ಗಾನ್ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೈಪ್‍ಲೈನ್ ಸೌಲಭ್ಯ ಸೇರಿದಂತೆ ಒಟ್ಟು 613 ಆಕ್ಸಿಜನ್ ಪಾಯಿಂಟ್ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ 500 ಆಕ್ಸಿಜನ್ ಪಾಯಿಂಟ್ ಕಲ್ಪಿಸುವುದರ ಕುರಿತು ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಇದಕ್ಕೆ 1.20ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಕೆಎಸ್‍ಎಚ್‍ಆರ್‍ಡಿಪಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿಕಿರಣ್ ಅವರು ಮಾಹಿತಿ ನೀಡಿದರು. ಹೆಚ್ಚುವರಿ ಆಕ್ಸಿಜನ್ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆಗೆ ತಕ್ಷಣ ಅನುಮೋದನೆ ಪಡೆದುಕೊಂಡು ಕಾರ್ಯಾರಂಭ ಮಾಡುವಂತೆ ಸಚಿವರು ತಾಕೀತು ಮಾಡಿದರು.
ಲಸಿಕೆ ಕೊರತೆ ಇಲ್ಲ
ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕೆ ನೀಡಲಾಗುತ್ತಿದ್ದು, ಅರ್ಹ ವ್ಯಕ್ತಿಗಳು ಆಸ್ಪತ್ರೆಗೆ ತೆರಳಿ ಆನ್‍ಲೈನ್‍ನಲ್ಲಿ ತಮ್ಮ ಮಾಹಿತಿ ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ಅಲ್ಲಿಯೇ ಲಸಿಕೆ ನೀಡಲಾಗುವುದು ಅಥವಾ ಲಸಿಕೆ ನೀಡುವ ದಿನಾಂಕವನ್ನು ತಿಳಿಸಲಾಗುವುದು. ಖಾಸಗಿ ಆಸ್ಪತ್ರೆಗಳು ಸಹ ಲಸಿಕೆಯನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಎಂ.ಎಲ್, ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಡಾ.ಶ್ರೀಧರ್, ಶಿಮ್ಸ್ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ವಾಣಿ ಕೋರಿ, ಡಾ.ಗೌತಮ್, ದಿವಾಕರ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.