ಶಂಕರಘಟ್ಟ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಮಂಗಳವಾರ ಪ್ರಕಟಿಸಿದ್ದು, ಏಪ್ರಿಲ್ 21ರಿಂದ ಮೇ 04ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆ ಯಲ್ಲಿ ಏಪ್ರಿಲ್ 21ರಿಂದ ಮೇ 03ರವರೆಗೆ ನಿಗದಿಯಾಗಿರುವ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕುಲಸಚಿವ ಪ್ರೊ. ಪಿ. ಕಣ್ಣನ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಾರ್ಗಸೂಚಿ ಹೊರಬಿದ್ದ ಬಳಿಕ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳು ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ನಿಗದಿಯಾಗಿದ್ದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು, ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಮೇ 04 ನಂತರ ಸರ್ಕಾರದ ನಿರ್ದೇಶನದ ಮೇರೆಗೆ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.