ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲವು ಈಗಾಗಲೇ ಬಿಟ್ಟುಕೊಟ್ಟಿರುವ ೬.೧೬ ಎಕರೆ ಜಾಗದಲ್ಲಿನ ಹೋಟೆಲ್ ಇರುವ ಕಟ್ಟಡವನ್ನು ಡೆಮಾಲಿಷ್ ಮಾಡಿಕೊಡಬೇಕು, ಅದೇ ಪ್ರದೇಶದಲ್ಲಿ ಅರ್ಚಕರು ನಿರ್ಮಿಸಿಕೊಂಡಿರುವ ಮನೆಯ ಕಟ್ಟಡವನ್ನು ಶಿವಮೊಗ್ಗ ಜಿಲ್ಲಾಡಳಿತವು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ದೇವಾಲಯದಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಹೈಕೋರ್ಟ್‌ನಲ್ಲಿ ರಾಜ್ಯ ಉಚ್ಛನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮುಂದುವರಿದ ವಿಚಾರಣೆಯಲ್ಲಿ ಮುಖ್ಯನ್ಯಾಯಮೂರ್ತಿ ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ಈ ಆದೇಶ ನೀಡಿದೆ.
ನಿಟ್ಟೂರಿನ ಲಕ್ಷ್ಮಿನಾರಾಯಣ, ತುಮರಿಯ ಗೋವರ್ಧನ ಹಾಗೂ ಶಿವರಾಜ್ ಎಂಬುವರರು ಸಲ್ಲಿಸಿ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಹಿಂದಿನ ಆದೇಶದಲ್ಲಿ ನ್ಯಾಯಾಲಯವು ದೇವಸ್ಥಾನದ ಬೌಂಡರಿಯಲ್ಲಿರುವ ಆರು ಎಕರೆ ಜಾಗವನ್ನು ಬಿಟ್ಟುಕೊಡುವಂತೆ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶ ಪಾಲಿಸಿದ ದೇವಸ್ಥಾನದ ಆಡಳಿತ ಮಂಡಳಿಯು ಸಾಗರ ತಹಶೀಲ್ದಾರ್ ಸಮ್ಮುಖದಲ್ಲಿ ಸರ್ವೆ ಮಾಡಿ ವಾಹನ ನಿಲ್ದಾಣ ಸೇರಿದಂತೆ ದೇವಸ್ಥಾನದ ಸುತ್ತಣ ಇರುವ ಆರು ಎಕರೆ ಜಾಗವನ್ನು ತೆರವುಮಾಡಿಕೊಟ್ಟಿತ್ತು.
ಸರಕಾರದ ಸುಪರ್ದಿಗೆ ವಹಿಸಿದ್ದ ಜಾಗದಲ್ಲಿರುವ ಹೋಟೆಲ್ ಕಟ್ಟಡವನ್ನು ತೆರವು ಮಾಡಿರಲಿಲ್ಲ. ದೇವಸ್ಥಾನದ ಕೆಳಭಾಗದಲ್ಲಿರುವ ಮತ್ತು ತಹಶಿಲ್ದಾರ್ ಅವರು ತೆರವಿಗಾಗಿ ಗುರುತು ಮಾಡಿರುವ ಅರ್ಚಕರ ಮನೆ ಇರುವ ಪ್ರದೇಶವನ್ನೂ ಖುಲ್ಲಾ ಮಾಡಿಕೊಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯು ಹೋಟೆಲ್ ಕಟ್ಟಡವನ್ನು ತೆರವು ಮಾಡಬೇಕು ಮತ್ತು ಆರ್ಚಕರ ಮನೆ, ಕೊಟ್ಟಿಗೆ ಇತ್ಯಾದಿ ಜಾಗವನ್ನು ಜಿಲ್ಲಾಡಳಿತ ತೆರವು ಮಾಡಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ