Malenadu Mitra
ರಾಜ್ಯ ಶಿವಮೊಗ್ಗ

ಸಹ್ಯಾದ್ರಿ ಕ್ಯಾಂಪಸ್‍ನಲ್ಲೇ ಖೇಲೋ ಇಂಡಿಯಾ, ಕಾಲೇಜು ಪ್ರಾಚಾರ್ಯರ ಸಭೆಯಲ್ಲಿ ಸಂಸದ ರಾಘವೇಂದ್ರ ಅವರ ಮನವರಿಕೆ

ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‍ನಲ್ಲಿ ಖೇಲೋ ಇಂಡಿಯಾ ಹಾಗೂ ಸಾಯ್ ಆಶ್ರಯದಲ್ಲಿ ನಿರ್ಮಿಸಲಿರುವ ಉದ್ದೇಶಿತ ಕ್ರೀಡಾ ಸಂಕಿರಣ ಜಿಲ್ಲಾಡಳಿತದಲ್ಲಿ ಉಸ್ತುವಾರಿಯಲ್ಲಿಯೇ ಇರಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಶಿವಮೊಗ್ಗ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರು ಕಾಲೇಜಿನ ಪ್ರಾಚಾರ್ಯರಿಗೆ ಮನವರಿಕೆ ಮಾಡಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಕ್ರೀಡಾ ಸಮುಚ್ಛಯವು ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಯೋಜನೆ, ಕ್ರೀಡಾ ಪ್ರಾಧಿಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳಲಿದೆ. ಉದ್ದೇಶಿತ ಯೋಜನೆಗೆ 13 ಎಕರೆ ಜಾಗ ಅಗತ್ಯವಿದೆ. 33 ಎಕರೆ ಅಲ್ಲ. ಕ್ರೀಡಾ ತರಬೇತಿ ಇತ್ಯಾದಿಗಳು ಕೇಂದ್ರ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ ನಡೆಯುತ್ತವೆ. ಆದರೆ ಇಡೀ ಪ್ರದೇಶ ನಿರ್ಬಂಧಿತವಾಗಲಿದೆ ಎಂಬುದೆಲ್ಲ ಸುಳ್ಳು, ಹೀಗಿರುವಾಗ ಕಾಲೇಜು ಆಡಳಿತಮಂಡಳಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರೆನ್ನಲಾಗಿದೆ.

ಈ ಸಂದರ್ಭ ಮಾತನಾಡಿದ ಸಂಸದ ರಾಘವೇಂದ್ರ ಅವರು, ಉತ್ತಮ ಯೋಜನೆ ಜಿಲ್ಲೆಗೆ ಸಿಗುತ್ತಿದೆ. ಈಗಿನ ಕಾಮರ್ಸ್ ಕಾಲೇಜು ಕ್ರೀಡಾ ಹಾಸ್ಟೆಲ್ ಆಗಲಿದೆ. 10 ಕೋಟಿ ವೆಚ್ಚದಲ್ಲಿ ಮ್ಯಾಚ್ ಫ್ಯಾಕ್ಟರಿ ಜಾಗದಲ್ಲಿ ನಿರ್ಮಾಣ ಮಾಡಿಕೊಡುವ ಯೋಜನೆ ಇದೆ. ಕ್ರೀಡಾ ಸಂಕಿರಣವು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಹೇಳಿದರು.
ಶಿವಮೊಗ್ಗ ನಗರದ ಹೊರವಲಯದಲ್ಲಿ ಎಲ್ಲಾದರೂ ಮಾಡಬಹುದಲ್ಲ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಸಂಸದರು, ಹೊರವಲಯದಲ್ಲಿ ಕ್ರೀಡಾಂಗಣ ಮಾಡಿದರೆ, ಸ್ಥಳೀಯರಿಗೆ ಅನುಕೂಲವಾಗುವುದಿಲ್ಲ, ನೂತನ ಪ್ರಾಜೆಕ್ಟ್‍ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಪ್ರಾಚಾರ್ಯರಾದ ಡಾ.ವಾಗ್ದೇವಿ, ಡಾ.ಧನಂಜಯ ಹಾಗೂ ಕೆ.ಎಂ.ವೀಣಾ ಅವರು, ವಿವಿಧ ಯೋಜನೆಗಳಿಗೆ ಸಹ್ಯಾದ್ರಿ ಕಾಲೇಜಿನ ಭೂಮಿ ಹರಿದು ಹಂಚಿ ಹೋಗಿದೆ. ಈಗಲೂ ಅದೇ ಆದರೆ ನಮ್ಮ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕಾಲೇಜು ಹಾಗೂ ವಿವಿ ಅಧಿಕಾರಿಗಳನ್ನು ಕತ್ತಲಲ್ಲಿಟ್ಟು ಯೋಜನೆ ರೂಪಿಸಲಾಗುತ್ತಿದೆ. ಯಾರಿಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಸಾರ್ವಜನಿಕರು, ಮಾಧ್ಯಮದವರು ,ಹಳೇ ವಿದ್ಯಾರ್ಥಿಗಳು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದೂ ಅಲ್ಲದೆ ಕಾಲೇಜಿನ ಆಸ್ತಿ ತಪ್ಪಿಹೋಗುವ ಆಂತಕವಿದೆ ಎಂದು ತಮ್ಮ ಅಸಮಾಧಾನ ತೋಡಿಕೊಂಡಿರೆನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಮಾಧ್ಯಮಗಳ ಮೂಲಕ ಸಾರ್ವಜನಿಜಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಶಿವಮೊಗ್ಗ ಅಭಿವೃದ್ಧಿಯಾಗಬೇಕೆಂಬ ಉದ್ದೇಶದ ಹೊರತಾಗಿ ಬೇರೇನೂ ಇಲ್ಲ ಎಂದು ಸಮಜಾಯಿಷಿ ನೀಡಿದರೆನ್ನಲಾಗಿದೆ.


ಸಭೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಕುವೆಂಪು ವಿವಿ ಕುಲಪತಿ ಪ್ರೋ.ಬಿ.ವಿ.ವೀರಭದ್ರಪ್ಪ, ಕುಲಸಚಿವ ಪಾಟೀಲ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಸ್ವಾಮಿ, ಸಿಂಡಿಕೇಟ್ ಸದಸ್ಯರಾದ ರಮೇಶ್ ಬಾಬು, ಕಿರಣ್ ದೇಸಾಯಿ ಮತ್ತಿತರರು ಇದ್ದರು.
ಕಾಲೇಜು ಕ್ಯಾಂಪಸ್ ಅನ್ನು ಕೇಂದ್ರ ಕ್ರೀಡಾ ಪ್ರಾಧಿಕಾರಕ್ಕೆ ಕೊಡುವ ಬಗ್ಗೆ ಸಾರ್ವಜನಿಕರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹ್ಯಾದ್ರಿ ಆವರಣ ಉಳಿಸಿ ಆಂದೋಲನವೇ ನಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Ad Widget

Related posts

ಮೇ 15 ರಿಂದ ಭದ್ರಾ ನಾಲೆಗಳಿಗೆ ನೀರು ಬಂದ್

Malenadu Mirror Desk

ಗುರುವಿನ ಮಗ ಪಕ್ಷಕ್ಕೆ ಬಂದದ್ದು ಭಾಗ್ಯ ,ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಡಿಕೆಶಿ ಹೇಳಿಕೆ

Malenadu Mirror Desk

ಡಿಸಿಸಿ ಬ್ಯಾಂಕಿನಲ್ಲಿ ನೇಮಕಾತಿ ಹಗರಣ: ಹೋರಾಟಗಾರರು
ಎಂಡಿ ಅಮಾನತುಗೊಳಿಸಿ ಬಂಧಿಸಿ: ಲೋಕಾಯುಕ್ತ ತನಿಖೆ ನಡೆಸಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.