Malenadu Mitra
ಭಧ್ರಾವತಿ ರಾಜ್ಯ ಶಿವಮೊಗ್ಗ

ಸಿಎಂ ತವರಲ್ಲೇ ಅರಳದ ಕಮಲ

ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಿದ್ದು, ಬಿಜೆಪಿ ಶಕ್ತಿಕೇಂದ್ರ ಹಾಗೂ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿಯೇ ಆಡಳಿತ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದೆ.
ಮುಖ್ಯಮಂತ್ರಿ ಸೇರಿದಂತೆ ೬ ಶಾಸಕರು, ಸಂಸದರು ಹಾಗೂ ಮೇಲ್ಮನೆ ಸದಸ್ಯರು ಸೇರಿದಂತೆ ಸಂಪೂರ್ಣ ಬಿಜೆಪಿಮಯವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆದ ಹಿನ್ನಡೆ ಬಿಜೆಪಿ ಮಟ್ಟಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ. ರಾಜ್ಯದ ಉಳಿದವರಿಗೆ ಅಭಿವೃದ್ಧಿ ಮತ್ತು ಅನುದಾನವೆಲ್ಲ ಶಿವಮೊಗ್ಗಕ್ಕೇ ಹೋಗುತ್ತಿದೆ ಎಂಬ  ಅಸೂಹೆ ಇದೆ. ಅಭಿವೃದ್ಧಿ ಪಥದಲ್ಲಿಯೇ ಸಾಗುತ್ತಿರುವ ಜಿಲ್ಲೆಯಲ್ಲಿನ ಚುನಾವಣೆ ಫಲಿತಾಂಶ ಮಾತ್ರ  ವ್ಯತಿರಿಕ್ತವಾಗಿ ಬಂದಿರುವ ಬಗ್ಗೆ ಬಿಜೆಪಿ ನಾಯಕರಿಗೇ ಅಚ್ಚರಿ ಮೂಡಿಸಿದೆ.
ಮರುಳಾಗದ ಉಕ್ಕಿನ ನಗರಿ ಮತದಾರ

ಇಡೀ ಜಿಲ್ಲೆಯನ್ನು ಆವರಿಸಿಕೊಂಡಿರುವ ಬಿಜೆಪಿಯದು ಭದ್ರಾವತಿಯಲ್ಲಿ ಮಾತ್ರ ಮೊದಲಿಂದಲೂ ಶೂನ್ಯ ಸಾಧನೆಯೇ. ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೆಸರಾಗಿದ್ದ ಭದ್ರಾವತಿ ರಾಜಕಾರಣದಲ್ಲಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಮತ್ತು ಹಾಲಿ ಶಾಸಕರ ಬಿ.ಕೆ.ಸಂಗಮೇಶ್ ಅವರದ್ದೇ ಪಾರುಪಥ್ಯವಾಗಿತ್ತು.  ಅಪ್ಪಾಜಿಗೌಡರು ನಿಧನರಾದ ಬಳಿಕ ಸಂಗಮೇಶ್ ಅವರಿಗೆ ಪರ್‍ಯಾಯ ರಾಜಕೀಯ ಶಕ್ತಿಯಾಗಬೇಕೆಂಬ ಹವಣಿಕೆಯಲ್ಲಿ ಬಿಜೆಪಿ ಇದೆ. ಈ ಕಾರಣದಿಂದಲೇ ನಗರಸಭೆ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿತ್ತು ಮಾತ್ರವಲ್ಲದೆ ಅಪಾರ ಪ್ರಮಾಣದ ಸಂಪನ್ಮೂಲವನ್ನೂ ಹೂಡಿಕೆ ಮಾಡಿತ್ತು ಆದರೆ ಕೇವಲ ನಾಲ್ಕು ವಾರ್ಡ್‌ಗಳಲ್ಲಿ ಗೆಲ್ಲುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಘಟಾನುಘಟಿಗಳ ಪ್ರಚಾರ

ನಗರಸಭೆ ಚುನಾವಣೆ ಹೊಸ್ತಿಲಲ್ಲಿಯೇ ನಡೆದಿದ್ದ ಕಬಡ್ಡಿ ಗಲಾಟೆಯನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದ ಬಿಜೆಪಿ ನಗರಸಭೆ ಗೆಲುವಿನ ನಿರೀಕ್ಷೆ ಹೊಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿಯೇ ಪ್ರಚಾರ ಕಾರ್ಯ ನಡೆಸಿತ್ತು. ಬಿಜೆಪಿಯ ಜಿಲ್ಲಾ ಮುಖಂಡರುಗಳಿಗೆ ತಲಾ ಮೂರು ವಾರ್ಡುಗಳನ್ನು ವಹಿಸಿ ಪ್ರಚಾರ ನಡೆಸಲಾಗಿತ್ತು. ರಾಜ್ಯಸರಕಾರದ ಯೋಜನೆಗಳು, ಕೇಂದ್ರದಿಂದ ಕಾರ್ಖಾನೆಗಳ ಪುನರುಜ್ಜೀವನ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರೂ ಉಕ್ಕಿನ ನಗರಿಯ ಮತದಾರ ಬಿಜೆಪಿಗೆ ಮನಸೋಲಲಿಲ್ಲ. ಮೊದಲು ಮಾರುಗೆದ್ದು ಆಮೇಲೆ ಊರು ಗೆಲ್ಲುವ ಯೋಜನೆ ಹಾಕಿಕೊಂಡಿದ್ದ ಆಡಳಿತ ಪಕ್ಷವು ನಗರಸಭೆ ಗದ್ದುಗೆ ಹಿಡಿದು ಬಳಿಕ ವಿಧಾನ ಸಭೆ ಚುನಾವಣೆಯ ಮೇಲೆ ದ್ಠಷ್ಟಿ ಹಾಯಿಸಬಹುದೆಂಬ ನಿರೀಕ್ಷೆ ಹೊಂದಿತ್ತಾದರೂ ಈ ಫಲಿತಾಂಶದಿಂದ ಎಲ್ಲವೂ ತಲೆಕೆಳಗಾಗಿದೆ.

ಜೆಡಿಎಸ್ ಪರಾಕ್ರಮ

ಅಪ್ಪಾಜಿ ಗೌಡರಿಲ್ಲದೆ ಚುನಾವಣೆ ಎದುರಿಸಿದ ಜೆಡಿಎಸ್ ನಗರಸಭೆಯಲ್ಲಿ ಗಮನಾರ್ಹವಾದ ಸಾಧನೆಯನ್ನೇ ಮಾಡಿದೆ. ೧೧ ವಾರ್ಡುಗಳಲ್ಲಿ ಜಯಿಸುವ ಮೂಲಕ ಅಪ್ಪಾಜಿ ನಾಮಬಲಕ್ಕೆ ಭದ್ರಾವತಿಯಲ್ಲಿ ಬೆಲೆಯಿಂದ ಎಂಬುದನ್ನು ಸಾಬೀತು ಮಾಡಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ನೇತೃತ್ವದಲ್ಲಿ ಶಾರದಮ್ಮ ಅಪ್ಪಾಜಿ ಗೌಡ, ಅಜಿತ್ ಅಪ್ಪಾಜಿ ,ಕರುಣಾಮೂರ್ತಿ ಮೊದಲಾದವರು ಕೆಚ್ಚೆದೆಯಿಂದ ಚುನಾವಣೆ ಎದುರಿಸಿ ಭದ್ರಾವತಿಯಲ್ಲಿ ಅಪ್ಪಾಜಿಗೌಡರಿಗೆ ಇನ್ನೂ ಬೆಂಬಲ ಇದೆ ಎಂಬುದನ್ನು ಸಾಬೀತುಮಾಡಿದ್ದಾರೆ.

ಗೆದ್ದು ಬೀಗಿದ ಸಂಗಮೇಶ್

ಶಿವಮೊಗ್ಗ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಬಿ.ಕೆ.ಸಂಗಮೇಶ್ ಭದ್ರಾವತಿ ನಗರಸಭೆಯಲ್ಲಿ ಗೆಲ್ಲುವ ಮೂಲಕ ಬೀಗಿದ್ದಾರೆ. ಬಂಧುಬಳಗ ಮತ್ತು ಹಿಂಬಾಲಕರಿಗೇ ಟಿಕೆಟ್ ನೀಡಿದ್ದಾರೆ ಎಂಬ ಆರೋಪದ ನಡುವೆ ಸೋದರ ಬಿ.ಕೆ.ಮೋಹನ್ ಮತ್ತು ಅವರ ಮಗನನ್ನೂ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿದ್ದಾರೆ. ಪ್ರಬಲ ಎದುರಾಳಿ ಅಪ್ಪಾಜಿ ಗೌಡರಿಲ್ಲದ ಮೊದಲ ಚುನಾವಣೆಯಲ್ಲಿ ಸಂಗಮೇಶ್ ಗೆಲುವಿನ ದಡ ಸೇರಿದ್ದು, ರಾಜಕೀಯ ನಿರ್ವಾತವನ್ನು ತುಂಬಲು ಬಿಜೆಪಿಗೆ ಬಿಡಲಿಲ್ಲ ಎಂಬುದು ಪಕ್ಷದ ವಲಯದಲ್ಲಿ ಸಂಗಮೇಶ್ ಅವರಿಗೆ ವರ್ಚಸ್ಸು ತಂದುಕೊಡಲಿದೆ.

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಭದ್ರ ನೆಲೆಯೇ ಆಗಿತ್ತು. ಆದರೆ ೨೫ ವರ್ಷಗಳ ಬಳಿಕ ಕಾಂಗ್ರೆಸ್ ಬಹುಮತ ಪಡೆಯುವ ಮೂಲಕ ಪ್ರಭಾವಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಹಿನ್ನಡೆಯಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹಕಾರಿ ಧುರೀಣ ಆರ್.ಎಂ.ಮಂಜುನಾಥ ಗೌಡ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಯಶಸ್ಸು ಕಂಡಿದ್ದಾರೆ. ಗೌಡರು ಕಾಂಗ್ರೆಸ್ ಸೇರಲು ಆರಂಭದಲ್ಲಿ ವಿರೋಧ ವ್ಯಕ್ತಮಾಡಿದ್ದ ಕಿಮ್ಮನೆ ಅವರು ಡಿಕೆಶಿ ಮನವೊಲಿಸಿದ ಬಳಿಕ ಹಸಿರುನಿಶಾನೆ ತೋರಿದ್ದರು. ಒಂದೇ ಪಕ್ಷದಲ್ಲಿದ್ದರೂ ಆಂತರ್ಯದಲ್ಲಿ ಬೇಗುದಿ ಇದ್ದೇ ಇದೆ ಎಂದು ವಿರೋಧಿಗಳು ಅಪಪ್ರಚಾರ ಮಾಡಿದ್ದರೂ, ಪಟ್ಟಣ ಪಂಚಾಯಿತಿಯಲ್ಲಿ  ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈ ನಾಯಕರು ಯಶ ಕಂಡಿದ್ದಾರೆ.

ಒಟ್ಟಿನಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಗೆ ಈಗ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ದಿಕ್ಸೂಚಿಯಾಗಲಿದೆ ಎಂದೇ ಗೆದ್ದವರು ಬೀಗುತ್ತಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ಅಚ್ಚರಿ ತಂದಿದೆ. ಎಲ್ಲಿ ಏನು ಲೋಪವಾಗಿದೆ ಎಂಬುದನ್ನು ಜಿಲ್ಲಾ ಬಿಜೆಪಿ ಪರಿಶೀಲನೆ ನಡೆಸಲಿದೆ
-ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Ad Widget

Related posts

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ, ಸಸ್ಯ ಶಾಮಲ ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಒ ಸ್ನೇಹಲ್ ಸುಧಾಕರ್ ಹೇಳಿಕೆ

Malenadu Mirror Desk

ಹಬ್ಬಗಳು ಸಂಸ್ಕೃತಿಯ ಪ್ರತೀಕ: ಧರ್ಮದರ್ಶಿ ಡಾ.ರಾಮಪ್ಪ

Malenadu Mirror Desk

ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಅಗತ್ಯವಿಲ್ಲ: ಕೆ.ಬಿ ಪ್ರಸನ್ನಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.