ಮಲೆನಾಡಿನಲ್ಲಿ ಕೊರೊನ ಭೀಕರತೆ ದಿನೆ ದಿನೆ ಹೆಚ್ಚಾಗುತ್ತಿದೆ ಮೆಗ್ಗಾನ್ ವೈದ್ಯರು ಮತ್ತು ಸಿಬ್ಬಂದಿ ಹಗಲಿರುಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ, ಈ ಕಾರ್ಯ ಇನ್ನಷ್ಟು ಕ್ರೀಯಶೀಲವಾಗಲು ಉತ್ಸಾಹಿ ನಿರ್ದೇಶಕರ ಅಗತ್ಯವಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲವು ಕ್ರಿಯಾಶೀಲ ವೈದ್ಯರ ಪ್ರಾಮಾಣಿಕ ಸೇವೆಯಿಂದ ಕೋವಿಡ್ ಆಸ್ಪತ್ರೆಯ ನಿರ್ವಹಣೆ ತೃಪ್ತಿಕರವಾಗಿದೆ. ಆದರೆ ಈ ಸಮಯದಲ್ಲಿ ನಿರ್ದೇಶಕರಾದವರು (ಮುಖ್ಯಸ್ಥರಾದವರು) ಹೆಚ್ಚು ಜವಬ್ದಾರಿ ವಹಿಸಿಕೊಳ್ಳಬೇಕು, ಕಚೇರಿಯಲ್ಲಿಯೇ ಕುಳಿತು ಎಲ್ಲವನ್ನು ನಿಬಾಯಿಸಲಾಗದು ಅದರಲ್ಲು ದಿನವೂ ಸಾವಿನ ಪ್ರಕರಣ ವರದಿಯಾಗುತ್ತಿರುವ ಈ ಸಮಯದಲ್ಲಿ ನಿರ್ದೇಶಕರು ಕ್ರಿಯಾಶೀಲರಾಗಿದ್ದರೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡಬಹುದು ಎಂಬುದನ್ನು ಉಸ್ತುವಾರಿ ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ವಾರ್ಡಿಗೆ ಬರಲು ವಯಸ್ಸಿನ ಅಡ್ಡಿ
ನಿರ್ದೇಶಕರು ವಯೋವೃದ್ದರು ಮತ್ತು ದೈಹಿಕವಾಗಿ ಅಸಮರ್ಥರಾಗಿರುವುದರಿಂದ ಕೋವಿಡ್ ಆಸ್ಪತ್ರೆಯ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ನಿರ್ವಹಿಸಲಾಗುತ್ತಿಲ್ಲಾ ಎಂಬುದು ಆಸ್ಪತ್ರೆಯ ಹಲವು ಸಿಂಬಂದಿಗಳ ಅಭಿಪ್ರಾಯವಾಗಿದೆ. ಕೋವಿಡ್ ಆಸ್ಪತ್ರೆಗೆ ಕರ್ತವ್ಯಕ್ಕೆ ನೇಮಿಸಿದ ಕೆಲವು ಸಿಬ್ಬಂದಿಗಳು ಕೆಲಸಕ್ಕೆ ಚಕ್ಕರ್ ಹಾಕುತ್ತಾರೆ. ಇದನ್ನು ಪರಿಶೀಲಿಸಲು ನಿರ್ದೇಶಕರು ಬರುವುದೇ ಇಲ್ಲ. ತಮಗೆ ವಯಸ್ಸಾಗಿರುವುದರಿಂದ ಅಲ್ಲಿಗೆ ಬರಲು ಆಗುವುದಿಲ್ಲ ಎಂದು ಹೇಳುತ್ತಾರೆ. ಅಧಿಕಾರ ಅನುಭವಿಸಲು ಅಡ್ಡ ಬರದ ವಯಸ್ಸು ಕೋವಿಡ್ ವಾರ್ಡಿಗೆ ಭೇಟಿ ನೀಡಲು ಅಡ್ಡಿ ಆಗುತ್ತದೆಯೇ ಎಂದು ಶ್ರೀಪಾಲ್ ಪ್ರಶ್ನಿಸಿದ್ದಾರೆ.
ಅವಧಿ ಮೀರಿದ ಆಡಳಿತ
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಯ ಯಾವುದೇ ಸಮಸ್ಯೆ ಕೇಳಿದರೆ ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿ ವೈದ್ಯಕೀಯ ಅಧೀಕ್ಷಕರ ಕಡೆ ಕೈ ತೋರಿಸುತ್ತಾರೆ. ಒಬ್ಬ ನಿರ್ದೇಶಕರೆ ಹೀಗೆ ಜವಾಬ್ದಾರಿಯಿಂದ ನುಣುಚಿಕೊಂಡರೆ ರೋಗಿಗಳ ಕತೆ ಏನು.
ತಾತ್ಕಾಲಿಕವಾಗಿ ನೇಮಕವಾದ ನಿರ್ದೇಶಕರ ಅವಧಿ ಯಾವುದೇ ಕಾರಣದಿಂದ ಆರು ತಿಂಗಳು ಮೀರುವಂತಿಲ್ಲ ಎಂದು ಸಿಮ್ಸಿನ ಬೈಲಾದಲ್ಲಿ ಇದೆ. ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಆದೇಶವು ಕೂಡ 60 ವರ್ಷ ಮೆಲ್ಪಟ್ಟವರು ಹಂಗಾಮಿ ನಿರ್ದೇಶಕರಾಗಿಯು ಸಹ ಮುಂದುವರಿಯಬಾರದು ಎಂದು ಇದೆ ಆದರೆ ಈ ನಿರ್ದೇಶಕ ಸಿದ್ದಪ್ಪರವರು ಬಂದು ಹನ್ನೊಂದು ತಿಂಗಳು ಆಯಿತು. ಕಾನೂನು ಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಶ್ರೀಪಾಲ್ ದೂರಿದ್ದಾರೆ.
ಮೆಡಿಕಲ್ ಕಾಲೇಜು ಇರುವ ಆಸ್ಪತ್ರೆ ಜೊತೆಗೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಇಲ್ಲಿ ತುರ್ತಾಗಿ ಇನಷ್ಟು ಸಿಬ್ಬಂದಿ ಮತ್ತು ವೈದ್ಯರ ನೇಮಕವಾಗಬೇಕು, ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಕೂಡಲೆ ಒದಗಿಸಬೇಕು, ನಿರಂತರವಾಗಿವ ಮಾರಕ ಕೊರೊನ ರೋಗದ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳನ್ನು ನೀಡುವುದರೊಂದಿಗೆ ಅವರನ್ನ ಹುರಿದುಂಬಿಸುವ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವ ಯುವ ನಿರ್ದೇಶಕರೊಬ್ಬರನ್ನು ಸರಕಾರ ನೇಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.