ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆ ದಾಳಿಮಾಡಿದ್ದು, ಗದ್ದೆ ತೋಟ ನಾಶ ಮಾಡಿದೆ. ಗ್ರಾಮದ ಹಿಳ್ಳೋಡಿ ಗೋವಿಂದಪ್ಪ, ಶಿವಣ್ಣ ಹಾಗೂ ಸುನೀಲ್ ಭಟ್ಟ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಫಲಕೊಡುತಿದ್ದ ಐದು ತೆಂಗಿನ ಮರಗಳನ್ನು ಉರುಳಿಸಿದೆ. ಬಾಳೆ ತೋಟವನ್ನೂ ನಾಶ ಮಾಡಿದೆ. ಭತ್ತದ ಗದ್ದೆ ಹಾಗೂ ಶುಂಠಿ ಹೊಲದಲ್ಲಿ ತುಳಿದಾಡಿದ ಆನೆ ತಮ್ಮ ಪುಂಡಾಟ ಮೆರೆದು ರೈತರಿಗೆ ಫಸಲಿಗೆ ನಷ್ಟವುಂಟುಮಾಡಿದೆ.
ಮಲೆಶಂಕರ ಮತ್ತು ಪುರದಾಳು ನಡುವಿನ ಶೆಟ್ಟಿಹಳ್ಳಿ ಅಭಯಾರಣ್ಯ ಪ್ರದೇಶದಲ್ಲಿ ನಿತ್ಯ ಸಂಚರಿಸುವ ಆನೆಗಳು ಈಗ ಗ್ರಾಮಕ್ಕೆ ನುಗ್ಗಿ ಬೆಳೆ ಹಾನಿ ಮಾಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.