ಶಿವಮೊಗ್ಗ, ಮೇ ೪: ಜಿಲ್ಲೆಯಲ್ಲಿ ಕೊರೊನ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಶಿವಮೊಗ್ಗ ತಾಲೂಕಿನ ಆಯುಷ್ ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮಾಂತರ ಭಾಗದಲ್ಲಿನ ಆಯುಷ್ ವೈದ್ಯರನ್ನು ಮಹಾನಗರ ಪಾಲಿಕೆಯ ಹೋಮ್ ಐಸೋಲೇಷನ್‌ನಲ್ಲಿರುವ ಕೋವಿಡ್ ರೋಗಿಗಳ ನಿಗಾಕ್ಕೆ ನಿಯೋಜಿಸಲಾಗಿದೆ. ಈ ಕಾರಣದಿಂದ ಏಕ ವೈದ್ಯರ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಜನ ಹಳ್ಳಿಗಳಿಗೆ ಬಂದಿದ್ದು, ಕೊರೊನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಕೊರೊನ ಅಲ್ಲದೆ ಸಮಸ್ಯೆಗಳಿಗೆ ಗ್ರಾಮಾಂತರ ಭಾಗದಲ್ಲಿ ಆಯುಷ್ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಜಿಲ್ಲಾಡಳಿತದ ಕ್ರಮದಿಂದ ಗ್ರಾಮೀಣರಿಗೆ ಆರೋಗ್ಯ ಸೇವೆ ಸಿಗದಾಗಿದೆ. ಹಳ್ಳಿಜನ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೂ ಬರುವಂತಿಲ್ಲ. ಜಿಲ್ಲಾ ಕೇಂದ್ರಕ್ಕೆ ಬಂದರೆ ಎಲ್ಲಿ ಕೊರೊನ ಅಂಟುವುದೊ ಎಂಬ ಆತಂಕ ಹಳ್ಳಿ ಜನರಲ್ಲಿದೆ. ಇಂತಹ ಸನ್ನಿವೇಶದಲ್ಲಿ ಗ್ರಾಮೀಣ ಆರೋಗ್ಯ ಸೇವೆ ಸ್ಥಗಿತಮಾಡಿರುವುದು ಸಮಸ್ಯೆಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಾರಣಕ್ಕೆ ಆರೋಗ್ಯ ಸೇವೆಯನ್ನು ನಿಲ್ಲಿಸಬಾರದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಅವರು ಕೋವಿಡ್ ಮಾರ್ಗಸೂಚಿಯಲ್ಲಿಯೇ ನಮೂದು ಮಾಡಿದ್ದಾರೆ. ಆಯುಷ್ ಆಸ್ಪತ್ರೆಗಳು ನಿರಂತರ ಸೇವೆ ಮಾಡಬೇಕೆಂಬ ಉಲ್ಲೇಖವೂ ಅಲ್ಲಿದೆ. ಈ ನಡುವೆ ಶಿವಮೊಗ್ಗ ತಾಲೂಕು ಕೊಮ್ಮನಾಳು ಗ್ರಾಮಸ್ಥರು ಆಸ್ಪತ್ರೆ ಬಂದ್ ಮಾಡಿರುವುದರ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಊರಿಗೆ ಇದ್ದ ಒಬ್ಬ ವೈದ್ಯರನ್ನೂ ಬೇರೆ ಕಡೆಗೆ ನಿಯೋಜಿಸಿದರೆ, ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗುತ್ತದೆ.ಕೂಡಲೇ ಆಸ್ಪತ್ರೆಯನ್ನು ತೆರೆಯಬೇಕೆಂದು ಅವರು ಆಗ್ರಹಿಸಿದ್ದಾರೆ. ನಗರ ಪ್ರದೇಶದಲ್ಲಿ ಹೋಮ್ ಐಸೊಲೇಷನ್‌ನಲ್ಲಿರುವರಿಗೆ ಜಿಲ್ಲಾ ಆಸ್ಪತ್ರೆಯಿಂದಲೇ ನಿರ್ದೇಶನಗಳನ್ನು ಕೊಡಲು ಸಾಧ್ಯವಿದೆ. ಈ ಚಿಕ್ಕ ಕೆಲಸಕ್ಕೆ ವೈದ್ಯರನ್ನು ಬಳಿಸಿಕೊಂಡು ಗ್ರಾಮೀಣ ಆರೋಗ್ಯ ಸೇವಾ ವ್ಯವಸ್ಥೆಯನ್ನು ಹಾಳುಮಾಡುವುದು ಸರಿಯಲ್ಲ ಎಂದು ಕೊಮ್ಮನಾಳು ಗ್ರಾಮಸ್ಥರು ದೂರಿದ್ದಾರೆ.