Malenadu Mitra
ರಾಜ್ಯ ಶಿವಮೊಗ್ಗ

ಕೋವಿಡ್ ವಿರುದ್ಧ ಸಮನ್ವಯದಿಂದ ಕಾರ್ಯನಿರ್ವಹಣೆ ಅಗತ್ಯ: ಸೆಲ್ವಕುಮಾರ್

ಕೋವಿಡ್ ವಿರುದ್ಧ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ಹೇಳಿದರು.ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು,
 ಆಕ್ಸಿಜನ್ ಲಭ್ಯತೆ, ಬೆಡ್‍ಗಳ ಲಭ್ಯತೆ, ರೆಮಿಡೆಸಿಯರ್ ಅಗತ್ಯ ಪೂರೈಕೆ ಮೇಲೆ ನಿಗಾ ವಹಿಸಬೇಕು. ಹೋಂ ಐಸೋಲೇಷನ್ ಇರುವವರನ್ನು ಪ್ರತಿದಿನ ಕನಿಷ್ಟ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು. ಆಶಾ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕರೋನಾ ಪರೀಕ್ಷೆ ನಡೆಸಬೇಕು. ಸೋಂಕಿತರ ಸಂಪರ್ಕಿತರನ್ನು ಗುರುತಿಸುವ ಕಾರ್ಯವನ್ನು ಸಮರ್ಪಕವಾಗಿ ನಡೆಸಬೇಕು ಎಂದು ಹೇಳಿದರು.
ಲಸಿಕೆ ಪಡೆಯಲು ಬರುವವರಿಗೆ ಲಸಿಕೆ ಲಭ್ಯವಿಲ್ಲದಿದ್ದರೆ ನೀಡುವ ದಿನಾಂಕದ ಬಗ್ಗೆ ಸರಿಯಾಗಿ ಮಾಹಿತಿ ನೀಡಬೇಕು. ಲಸಿಕೆ ನೀಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮಾಹಿತಿ ನೀಡಿ, ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಪ್ರಸ್ತುತ ಒಟ್ಟು 509 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2894 ಮಂದಿ ಹೋಂ ಐಸೋಲೇಷನ್ ಇದ್ದಾರೆ. ಪಾಸಿಟಿವಿಟಿ ಪ್ರಮಾಣ ಮೇ ತಿಂಗಳಲ್ಲಿ ಹೆಚ್ಚಾಗಿದ್ದು ಪ್ರಸ್ತುತ 25.67 ರ ದರದಲ್ಲಿದೆ.  ಎಪ್ರಿಲ್ ತಿಂಗಳಲ್ಲಿ 40 ಹಾಗೂ ಮೇ ತಿಂಗಳಲ್ಲಿ ಇದುವರೆಗೆ 31 ಕರೋನಾ ಕಾರಣ ಸಾವು ದಾಖಲಾಗಿದೆ. ಶಿಕಾರಿಪುರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಐಸಿಯು ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಸೊರಬ ಮತ್ತು ಹೊಸನಗರ ಆಸ್ಪತ್ರೆಗಳಿಗೆ ತಜ್ಞ ವೈದ್ಯರ ಅಗತ್ಯವಿದೆ. ಶಿವಮೊಗ್ಗ ಮತ್ತು ಶಿಕಾರಿಪುರಗಳಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ 180ಮಂದಿ ಇದ್ದಾರೆ ಎಂದರು.


ಇದುವರೆಗೆ ಒಟ್ಟು 2,35,406 ಮಂದಿಗೆ ಪ್ರಥಮ ಡೋಸ್ ಮತ್ತು 39401 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ಪ್ರಸ್ತುತ 4400 ಕೋವಿಶೀಲ್ಡ್ ಮತ್ತು 10 ಕೋವ್ಯಾಕ್ಸಿನ್ ಲಭ್ಯವಿದೆ. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗಾಗಿ 2237 ಬೆಡ್‍ಗಳನ್ನು ಮೀಸಲಿರಿಸಲಾಗಿದ್ದು, ಅವುಗಳ ಪೈಕಿ 1329 ಬೆಡ್‍ಗಳು ಖಾಲಿಯಿವೆ. ಇದರಲ್ಲಿ 1101 ಜನರಲ್ ಬೆಡ್, 77 ಐಸಿಯು, 53 ಐಸಿಯುವಿ ಮತ್ತು 96 ಎಚ್‍ಡಿಯು ಬೆಡ್‍ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 284 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 128 ರೆಮಡೆಸಿವಿರ್ ಇಂಜೆಕ್ಷನ್ ಲಭ್ಯವಿದೆ ಎಂದು ಮಾಹಿತಿ ನೀಡಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮೆಗ್ಗಾನ್ ನಿರ್ದೇಶಕ ಡಾ.ಸಿದ್ದಪ್ಪ, ಡಾ.ಶಂಕ್ರಪ್ಪ, ಡಾ.ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ನೂತನ ಶಿಕ್ಷಣ ನೀತಿಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳ : ಸಚಿವ ಡಾ.ಅಶ್ವಥ್ ನಾರಾಯಣ

Malenadu Mirror Desk

ಹುಂಚಾ ಗ್ರಾಮದಲ್ಲಿ ಕೊರೊನಾಕ್ಕೆ ಯುವಕ ಬಲಿ.

Malenadu Mirror Desk

ಲಾಕ್‍ಡೌನ್ ಕಟ್ಟುನಿಟ್ಟಿನ ಜಾರಿಗೆ ಎಲ್ಲರ ಸಹಕಾರ ಅಗತ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.