ಕೋವಿಡ್ 2ನೇ ಅಲೆಯು ರಾಜ್ಯಾದ್ಯಂತ ತೀವ್ರವಾಗಿ ಹರಡುತ್ತಿದ್ದು, ರಾಜ್ಯ ಸರ್ಕಾರ ಏ.27 ರಿಂದ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಎಲ್ಲಾ ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಕಸಸಂಗ್ರಹಣೆಯ ಎಲ್ಲಾ ಆಟೋ ಟಿಪ್ಪರ್‌ಗಳಲ್ಲಿ ಹಾಗೂ ೫ ಖಾಸಗಿ ಆಟೋಗಳಲ್ಲಿ ಕೋವಿಡ್-19ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಇದುವರೆಗೂ ಪಾಲಿಕೆಯಿಂದ 32ಮೈಕ್ರೊ ಕಂಟೈನ್‌ಮೆಂಟ್ ಜೋನ್‌ಗಳನ್ನು ಮಾಡಲಾಗಿದ್ದು, ಪ್ರಸ್ತುತ 30ಸಕ್ರಿಯ ಕಂಟೈನ್‌ಮೆಂಟ್ ಜೋನ್‌ಗಳಿವೆ. ಸರ್ಕಾರದ ಮಾರ್ಗಸೂಚಿ ಅನುಷ್ಟಾನಗೊಳಿಸುವ ಸಂಬಂಧ 6ಜನರಿರುವ 10 ತಂಡಗಳನ್ನು ರಚಿಸಲಾಗಿದೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಉಲ್ಲಂಘನೆಯಡಿ2,274 ಪ್ರಕರಣಗಳಿಂದ5,89,750 ರೂ. ದಂಡ ವಿಧಿಸಲಾಗಿದೆ ಹಾಗೂ7ಪ್ರಕರಣಗಳಿಗೆ ಆರಕ್ಷಕ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಚೆಕ್ ಪೋಸ್ಟ್ ನಿರ್ವಹಣೆಗಾಗಿ ಪಾಲಿಕೆಯ8 ಸಿಬ್ಬಂದಿಗಳನ್ನು ಆರಕ್ಷಕ ಇಲಾಖೆಗೆ ನಿಯೋಜಿಸಲಾಗಿದೆ. ಪಾಲಿಕೆಯ1 ಮುಕ್ತಿ ವಾಹಿನಿ ವಾಹನ ಹಾಗೂ ಪಿಪಿಇ ಕಿಟ್‌ಗಳನ್ನು ಮೆಗ್ಗಾನ್ ಭೋಧನಾ ಆಸ್ಪತ್ರೆಗೆ ಕೋವಿಡ್-19ಗಾಗಿ ನೀಡಲಾಗಿದೆ ಎಂದರು.
ಶವ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯು ಮರಣ ಹೊಂದಿದಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಯನ್ವಯ ಕರ್ತವ್ಯ ನಿರ್ವಹಿಸಲು 6 ತಂಡ ರಚಿಸಲಾಗಿದೆ ಎಂದ ಅವರು ಕೊರೋನಾ ವಾರ್ ರೂಂನ್ನು ಪಾಲಿಕೆಯಲ್ಲಿ ತೆರೆಯಲಾಗಿದ್ದು, ಸಹಾಯವಾಣಿ ಟೋಲ್ ಫ್ರೀ ನಂ: 18004257677 ಆಗಿದೆ ಎಂದರು.
ನಗರದ ಕೂಲಿ ಕಾರ್ಮಿಕರು, ವಲಸಿಗರಿಗೆ ಮತ್ತು ಇತರೆ ದುರ್ಬಲ ವರ್ಗದವರಿಗೆ, ಬಡವರಿಗೆ ಅನುಕೂಲವಾಗುವಂತೆ ಪ್ರತಿದಿನ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಇಂದಿರಾ ಕ್ಯಾಂಟೀನ್‌ಗಳ ಮೂಲಕ ಉಚಿತವಾಗಿ ನೀಡಲಾಗುತ್ತಿದ್ದು, ಪಾಲಿಕೆಯ ಆರೋಗ್ಯ ವಿಭಾಗ ಇದರ ನಿರ್ವಹಣೆ ವಹಿಸಲಿದೆ ಎಂದರು.
ಆನ್‌ಲೈನ್ ಮೂಲಕ ಆಸ್ತಿತೆರಿಗೆಯನ್ನು ಕಟ್ಟಬಹುದಾಗಿದೆ. ಆಸ್ತಿ ತೆರಿಗೆಯಲ್ಲಿ ಶೇ.೫ ರಷ್ಟು ರಿಯಾಯಿತಿಯನ್ನು ಜೂನ್30ರ ವರೆಗೆ ವಿಸ್ತರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನವಿಲೆ ಧೀರರಾಜ್, ಮಾಜಿ ಮೇಯರ್ ಸುವರ್ಣ ಶಂಕರ್, ಮಾಜಿ ಉಪ ಮೇಯರ್ ಸುರೇಖಾ ಮುರುಳೀಧರ್, ಆಯುಕ್ತ ಚಿದಾನಂದ್‌ವಟಾರೆ, ಎಸ್.ಜ್ಞಾನೇಶ್ವರ್, ಅನಿತಾ ರವಿಶಂಕರ್ ಇನ್ನಿತರರು ಉಪಸ್ಥಿತರಿದ್ದರು.