ಶಿವಮೊಗ್ಗ: ಕೊರೊನ ನಿಯಂತ್ರಣದಲ್ಲಿ ಫ್ರಂಟ್‌ಲೈನ್ ವಾರಿಯರ್‍ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರ ಆರೋಗ್ಯ ರಕ್ಷಣೆಗೆ ಸರಕಾರ ಆದ್ಯತೆ ನೀಡಿದ್ದು, ಅದರಂತೆ ಶಿವಮೊಗ್ಗದ ೧೮ ವರ್ಷ ಮೇಲ್ಪಟ್ಟ ಪತ್ರಕರ್ತರಿಗೆ ಲಸಿಕೆ ನೀಡಲಾಗಿದೆ. ಸರಕಾರ ಕೋವಿಡ್ ಅಲೆ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಲಸಿಕಾ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು. ನಿತ್ಯವೂ ಆರೋಗ್ಯ ಕಾರ್ಯಕರ್ತರಂತೆ ಪತ್ರಕರ್ತರೂ ಕೆಲಸ ನಿರ್ವಹಿಸುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಲಸಿಕಾ ಅಭಿಯಾನದ ಉಸ್ತುವಾರಿ ಡಾ.ನಾಗರಾಜ್ ನಾಯ್ಕ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್, ಸಹಕಾರ್ಯದರ್ಶಿ ಗಿರೀಶ್ ಉಮ್ರಾಯ್ ಮತ್ತಿತರರಿದ್ದರು. ಪತ್ರಕರ್ತರು ಮತ್ತು ಪತ್ರಿಕಾ ಕಾರ್ಯಾಲಯದ ಸಿಬ್ಬಂದಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಸಿಕೆ ನೀಡಲಾಯಿತು. ವಿಶ್ವದಾದಿಯರ ದಿನದಂದೆ ಈ ಕಾರ್ಯಕ್ರಮ ಆಯೋಜಿಸಿದ್ದರಿಂದ ಪತ್ರಕರ್ತರ ಪರವಾಗಿ ಲಸಿಕೆ ಅಭಿಯಾನದಲ್ಲಿ ಭಾಗಿಯಾಗಿದ್ದ ವೈದ್ಯರು, ನರ್ಸ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಗೌರವಿಸಲಾಯಿತು.