ಕೋವಿಡ್ ಎರಡನೇ ಅಲೆಯು ರಾಜ್ಯದ ಜನರ ಜೀವ ತೆಗೆಯುತ್ತಿದ್ದರೂ, ರಾಜ್ಯದ ಸಂಸದರು ಮಾತ್ರ ಮೌನಕ್ಕೆ ಶರಣಾಗಿರುವುದು ಏಕೆಂದು ಅರ್ಥವಾಗುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ ಹೇಳಿದ್ದಾರೆ.
ಕೋವಿಡ್ ಅಲೆಗೆ ಸಿಕ್ಕು ರಾಜ್ಯದ ಜನರು ನರಳುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತ್ರ ಅಕ್ಷರಶಃ ರಾಜ್ಯಕ್ಕೆ ವಿರೋಧಿಯಾಗಿದೆ. ಮಲತಾಯಿಯ ಮಕ್ಕಳನ್ನು ದ್ವೇಷದಿಂದ ಕಾಣುವುದು ಸಹಜ ಇರಬಹುದೆನೋ ಆದರೆ, ಸ್ವಂತ ಮಕ್ಕಳನ್ನು ಕಡೆಗಾಣಿಸುವುದನ್ನು ನಾವು ಕಂಡಿರಲಿಲ್ಲ. ಕರ್ನಾಟಕದ ಬಗ್ಗೆ ಈ ರೀತಿಯ ಅಸಡ್ಡೆ ಖಂಡನೀಯ ಎಂದಿದ್ದಾರೆ.
ಜಿಲ್ಲೆಯ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಗೆ ಹಲವು ಅಭಿವೃದ್ಧಿ ಯೋಜನೆ ತಂದಿರುವುದು ಸ್ವಾಗತಾರ್ಹ. ಆದರೆ, ಕೋವಿಡ್ ವಿಷಯದಲ್ಲಿ ಅವರ ಸಾಧನೆ ಮಾತ್ರ ಶೂನ್ಯವಾಗಿದೆ. ಅವರ ಅಭಿವೃದ್ಧಿ ಕಾರ್ಯಗಳು ಕೂಡ ಮರೆಯಾಗುವಂತರ ಅವರು ಕೋವಿಡ್ ವಿಷಯದಲ್ಲಿ ಯಾವ ಒತ್ತಡವನ್ನು ಕೇಂದ್ರದ ಮೇಲೆ ಹಾಕಿಲ್ಲ ಎಂದಿದ್ದಾರೆ.
ರಾಜ್ಯದ ಬಿಜೆಪಿ ಸಂಸದರು ಮೋದಿಯ ಭಯಕ್ಕೋ, ಅಥವಾ ಕೇಳುವ ತಾಕತ್ ಇಲ್ಲದಿರುವುದಕ್ಕೋ ಸುಮ್ಮನೆ ಇರುವುದನ್ನು ನೋಡಿದರೆ ಅಚ್ಚರಿ ಉಂಟಾಗುತ್ತದೆ. ಮತ್ತೊಂದು ಕಡೆ ಕೆಲವರು, ಲಸಿಕೆ ಸಿಗದಿದ್ದರೆ ನೇಣು ಹಾಕಿಕೊಳ್ಳೋಣವಾ? ನ್ಯಾಯಾಧೀಶರು ಸರ್ವಜ್ಞರೇ ಎಂಬು ಉಡಾಫೆಯ ಮಾತುಗಳನ್ನು ಆಡುತ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಹೀಗೆ ಹೇಳಿಕೆ ನೀಡುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಸೇರಿದಂತೆ ರಾಜ್ಯದ ಸಂಸದರು ತಮ್ಮ ಮೌನವನ್ನು ಮುರಿದು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ತಂದು ಆಕ್ಸಿಜನ್, ಲಸಿಕೆ ಸೇರಿದಂತೆ ರಾಜ್ಯಕ್ಕೆ ಸಿಗಬೇಕಾದ ಪ್ರಾಣವಾಯು ರಾಜ್ಯಕ್ಕೆ ತರಿಸಿ ಜನರ ಜೀವ ಉಳಿಸಬೇಕೆಂದು ಆಗ್ರಹಿಸಿದ್ದಾರೆ.