ಕೋವಿಡ್ ರೋಗಿಗಳಲ್ಲಿ ಬ್ಲಾಕ್ ಫಂಗಸ್ ರೋಗ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದರ ತಡೆಗೆ ಮಾರ್ಗಸೂಚಿ ಹೊರಡಿಸಿದ್ದು, ಅದನ್ನು ಅನುಸರಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಧೀರ್ಘಕಾಲೀನ ಕೋವಿಡ್ ಚಿಕಿತ್ಸೆ ಪಡೆದುಕೊಂಡವರಲ್ಲಿ ಮ್ಯೂಕರ್‍ಮೈಕೋಸಿಸ್ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಚಿಕಿತ್ಸೆ ಸಂದರ್ಭದಲ್ಲಿ ಸ್ಟಿರಾಯ್ಡ್ ಸೀಮಿತವಾಗಿ ಸೂಕ್ತ ಸಮಯದಲ್ಲಿ ಮತ್ತು ಅವಧಿಗೆ ಬಳಸಬೇಕು. ಸಕ್ಕರೆಯನ್ನು ನಿಯಂತ್ರಿಸಬೇಕು. ಆಂಟಿಬಯೋಟಿಕ್ ಮತ್ತು ಆಂಟಿಫಂಗಸ್ ಸೀಮಿತವಾಗಿ ಬಳಸಿ. ಆಕ್ಸಿಜನ್ ಥೆರಪಿ ಸಂದರ್ಭದಲ್ಲಿ ಶುದ್ಧ ಮತ್ತು ಸ್ಟೆರೈಲ್ ನೀರನ್ನು ಬಳಸಬೇಕು. ಮಿನರಲ್ ವಾಟರ್ ಸಹ ಬಳಸಬಾರದು. ಹ್ಯುಮಿಡಿಫ್ಲೈಯರ್‍ಗನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕನಿಷ್ಟ ಮಟ್ಟಕ್ಕಿಂತ ನೀರು ಕೆಳಗೆ ಬಾರದಂತೆ ಎಚ್ಚರಿಕೆ ವಹಿಸಬೇಕು. ಇದರಲ್ಲಿರುವ ನೀರನ್ನು ಪ್ರತಿದಿನ ಕಡ್ಡಾಯವಾಗಿ ಬದಲಾಯಿಸಬೇಕು ಮತ್ತು ಶುದ್ಧ ನೀರಿನಿಂದ ತೊಳೆದು ಒಣಗಿಸಬೇಕು. ಎಲ್ಲಾ ಸರ್ಕಾರಿ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳು ಸದರಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.