ಖ್ಯಾತ ವ್ಯಂಗ್ಯ ಚಿತ್ರಕಾರ ಗಂಗಾಧರ್ ಅಡ್ಡೇರಿಗೆ ನುಡಿ ನಮನ
ನನಗೆ ಕೊರೊನ ಪಾಸಿಟಿವ್… ಟ್ರೀಟ್‍ಮೆಂಟಲ್ಲಿದಿನಿ ಬಂದವನೇ ಮತ್ತೆ ಚಿತ್ರ ಬರೆದುಕೊಡುವೆ. ಅಲ್ಲೀತನಕ ಹಳೆಯ ಚಿತ್ರಗಳನ್ನೇ ಬಳಸಿ ಸರ್. ಇದು ಖ್ಯಾತ ವ್ಯಂಗ್ಯಚಿತ್ರಕಾರ ಗಂಗಾಧರ್ ಅಡ್ಡೇರಿ ಅವರ ಮೊಬೈಲ್ ಸಂದೇಶ.
ಹೌದು ಏಪ್ರಿಲ್ ತಿಂಗಳಿಂದ ಕ್ರಾಂತದೀಪ ಪತ್ರಿಕೆಗೆ ಕಾರ್ಟೂನ್ ಬರೆದುಕೊಡುತ್ತಿದ್ದ ಗಂಗಾಧರ್, ಮೃದುಭಾಷಿ, ಅಪ್ಪಟ ಪ್ರತಿಭಾವಂತ, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅವರ ಕಾರ್ಟೂನ್‍ಗಳು ಪ್ರಕಟವಾಗುತ್ತಿದ್ದರೂ, ನಮ್ಮದೇ ಊರಿನ ಪತ್ರಿಕೆಯಲ್ಲಿ ನಿತ್ಯವೂ ಕಾರ್ಟೂನ್ ಪ್ರಕಟವಾಗಬೇಕೆಂಬ ಹಂಬಲ ಅವರಲ್ಲಿತ್ತು. ಈ ಉದ್ದೇಶದಿಂದಲೇ ನಮ್ಮ ಪತ್ರಿಕೆಗೆ ಚಿತ್ರ ಕಳಿಸುತ್ತಿದ್ದರು. ತಮ್ಮ ಅಡ್ಡ ಗೆರೆಯಿಂದಲೇ ಸಮಾಜಕ್ಕೆ ಚಿಕಿತ್ಸಕ ಸಂದೇಶ ಕೊಡುತಿದ್ದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದ ಅವರು, ನಿತ್ಯವೂ ಸಂಜೆ.7.30ರ ಹೊತ್ತಿಗೆ ವ್ಯಂಗ್ಯ ಚಿತ್ರ ತಲುಪುವಂತೆ ನೋಡಿಕೊಳ್ಳುತ್ತಿದ್ದರು. ಇಂತಹ ವಿಷಯಕ್ಕೇ ಚಿತ್ರ ಬೇಕು ಎಂದು ಹೇಳಿದರೆ ಅದಕ್ಕೆ ತಕ್ಕಂತೆ ಅವರ ಚಿತ್ರ ಕೌಶಲ ಮೂಡುತಿತ್ತು.
ಸೋತ ಕೈ
ಏಪ್ರಿಲ್ 27 ರಂದು ಯಾಕೊ ಸ್ವಲ್ಪ ಮೈ ಹುಷಾರಿಲ್ಲ ಇಂದು ಚಿತ್ರ ಕಳಿಸಲ್ಲ ಎಂದು ಸಂದೇಶ ಕಳಿಸಿದ್ದರು. ಮರುದಿನವೂ ಅದೇ ಸಂದೇಶ ಬಂತು. ಮರು ಸಂದೇಶದಲ್ಲಿ ಬೆಂಗಳೂರಲ್ಲಿ ಕೊರೊನ ಹೆಚ್ಚಾಗ್ತಿದೆ, ಹುಷಾರು ಚಿತ್ರ ಇರಲಿ ಆರೋಗ್ಯದ ಕಡೆ ಗಮನ ಕೊಡಿ ಎಂದು ದೈರ್ಯ ಹೇಳಿದ್ದೆ. ಏಪ್ರಿಲ್ 30 ರಂದು ನನಗೆ ಕೋವಿಡ್ ಪಾಸಿಟಿವ್ ಇದೆ. ಟ್ರೀಟ್‍ಮೆಂಟ್‍ನಲ್ಲಿದ್ದೇನೆ ಹುಷಾರಾದ ಮೇಲೆ ಮತ್ತೆ ಚಿತ್ರ ಕಳಿಸುವೆ ಎಂದು ಹೇಳಿದ್ದರು.
ವಾರದ ಬಳಿಕ ಅವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಮತ್ತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ದೈರ್ಯ ಹೇಳಿದ್ದೆ, ಗುಣವಾಗುತ್ತಿದ್ದೇನೆ ಎರಡು ದಿನದಲ್ಲಿ ಬಿಡುಗಡೆ ಹೊಂದುತ್ತೇನೆ ಎಂದು ವಾಟ್ಸ್‍ಆ್ಯಪ್ ಸಂದೇಶ ಕಳಿಸಿದ್ದರು. ದೇವರು ದೊಡ್ಡವನು ಒಳ್ಳೆಯದಾಯಿತು ಎಂದು ಸುಮ್ಮನಾಗಿದ್ದೆ.
ನೋವಿನ ಸಂದೇಶ
ಸೋಮವಾರ ರಾತ್ರಿ 9.30 ರ ಹೊತ್ತಿಗೆ ಗೆಳೆಯರೊಬ್ಬರು ಫೋನ್ ಮಾಡಿ ಗಂಗಾಧರ್ ಪರಿಸ್ಥಿತಿ ಸರಿಯಿಲ್ಲ. ವೆಂಟಿಲೇಟರ್ ಇಲ್ಲದಿದ್ದರೆ ಬದುಕುವುದು ಕಷ್ಟ ಎಂದು ಹೇಳಿದರು. ತಕ್ಷಣ ಪತ್ರಿಕೆ ಸಂಪಾದಕರಾದ ಎನ್.ಮಂಜುನಾಥ್ ಅವರನ್ನೂ ಸಂಪರ್ಕಿಸಿದೆವು. ಅವರು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಆದರೆ ಅಲ್ಲಿ ಪರಿಸ್ಥಿತಿಯೇ ಭಿನ್ನವಾಗಿದೆ. ಮೆಗ್ಗಾನ್‍ನಲ್ಲಿರುವ ಎಲ್ಲಾ ವೆಂಟಿಲೇಟರ್‍ಗಳಲ್ಲಿಯೂ ಕೊರೊನ ಸೋಂಕಿತರಿದ್ದಾರೆ. ಯಾರಾದರೂ ಗುಣವಾಗಬೇಕು ಇಲ್ಲ, ಸಾಯಬೇಕು ಹಂಗಾದಲ್ಲಿ ಮಾತ್ರ ವೆಂಟಿಲೇಟರ್ ಸಿಗುತ್ತದೆ ಎಂಬರ್ಥದ ಸಂದೇಶ ಬಂದಿತು. ಕೊನೆಗೂ ಗಂಗಾಧರ್‍ಗೆ ವೆಂಟಿಲೇಟರ್ ಸಿಗಲಿಲ್ಲ. ಅಪ್ರತಿಮ ಕಲಾವಿದನೊಬ್ಬ ತೀರಾ 43 ವರ್ಷಕ್ಕೇ ಇಹಲೋಕ ತ್ಯಜಿಸುವಂತಾಯಿತು.
ಹುಷಾರಾಗಿ ಬರುವೆ, ಮತ್ತೆ ಚಿತ್ರ ಬರೆದುಕೊಡುವೆ ಎಂಬ ಸಂದೇಶ ಇನ್ನೂ ಮೊಬೈಲ್‍ನಲ್ಲಿ ಹಾಗೆಯೇ ಇದೆ. ಆದರೆ ಚಿತ್ರಬಿಡಿಸಬೇಕಾಗ ಗೆಳೆಯನೇ ಚಿತ್ರಪಟವನ್ನು ಸೇರಿ ಬಿಟ್ಟಿದ್ದಾನೆ. ಬೌತಿಕವಾಗಿ ಗಂಗಾಧರ್ ಇಲ್ಲದಿದ್ದರೂ ಅವರ ಅಡ್ಡಗೆರೆಯ ಸಂದೇಶ ಮಾತ್ರ ಅಮರವಾಗಿವೆ.
ವ್ಯವಸ್ಥೆ ಮಾಡಿದ ಕೊಲೆಯಲ್ಲವೆ?
ಕೊರೊನ ಎರಡನೆ ಅಲೆ ಬರಲಿದೆ ಎಂದು ಒಂದು ವರ್ಷದ ಹಿಂದೆಯೇ ತಜ್ಞರು ಹೇಳಿದ್ದರು. ಅದಕ್ಕೆ ಪೂರಕ ವ್ಯವಸ್ಥೆ ಮಾಡಿಕೊಳ್ಳದೆ ವ್ಯವಸ್ಥೆಯೇ ಜನರನ್ನೂ ಸಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.1100 ಬೆಡ್ ಸಾಮಥ್ರ್ಯದ ಮೆಗ್ಗಾನ್‍ನಲ್ಲಿ ನಿರೀಕ್ಷಿತ ಪ್ರಮಾಣದ ವೆಂಟಿಲೇಟರ್ ಇಲ್ಲವಾಗಿದೆ. ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್‍ಪಡೆದು ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಜನರು ಆರ್ಥಿಕವಾಗಿ ಸಬಲರಿಲ್ಲ. ಸರಕಾರ ನಮ್ಮಲ್ಲಿ ಎಲ್ಲಾ ವ್ಯವಸ್ಥೆ ಇದೆ ಎಂದು ಹೇಳುತ್ತಿರುವ ನಡುವೆಯೇ ಅಕ್ಸಿಜನ್, ವೆಂಟಿಲೇಟರ್ ಸಿಗದೇ ಅಮೂಲ್ಯ ಜೀವಗಳು ಖಾಲಿಯಾಗುತ್ತಲೇ ಇವೆ. ಆ ಸಾಲಿಗೆ ಗಂಗಾಧರ್ ಕೂಡಾ ಸೇರಿದರು. ಅಪ್ರತಿಮ ಕಲಾವಿದನೊಬ್ಬ ಇಲ್ಲಿನ ಅವ್ಯವಸ್ಥೆಗೆ ಬಲಿಯಾಗಿದ್ದಾರೆ. ಸರಕಾರ ಇನ್ನಾದರೂ ವ್ಯವಸ್ಥೆಯನ್ನು ಸದೃಢಗೊಳಿಸಬೇಕು.
-ಶಾಂತಿಸುತ