ಮಹಾಮಾರಿ ಕೊರೊನಕ್ಕೆ ಬಲಿಯಾದ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಹಾಗೂ ಬರಹಗಾರ ಕೊನೆಯದಾಗಿ ಬರೆದ ವ್ಯಂಗ್ಯಚಿತ್ರವೂ ಕ್ರೂರಿ ಕೊರೋನ ಕುರಿತದ್ದೇ ಆಗಿತ್ತು. ಒಬ್ಬ ಸೃಜನಶೀಲ ಕಲಾವಿದನಾಗಿ, ಬರಹಗಾರನಾಗಿ ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಸ್ಪಂದಿಸುತ್ತಿದ್ದ ಗಂಗಾಧರ್ ಅಡ್ಡೇರಿ ಕೊನೆಯ ದಿನಗಳಲ್ಲಿ ಕೊರೊನದ ಬಗ್ಗೆ ಜಾಗೃತಿ, ಅದರ ಕುರಿತಾದ ರಾಜಕಾರಣಿಗಳ ನಡೆಗಳ ಕುರಿತಾದ ವಿಡಂಬನೆಗಳ ಮೇಲೆಯೇ ಚಿತ್ರ ಬರೆದಿದ್ದರು.
ಏ.27 ಮತ್ತು 28 ರಂದು ಹುಷಾರಿಲ್ಲ ಎಂದು ಕಾರ್ಟೂನ್ ಬರವಣಿಗೆಗೆ ವಿರಾಮ ನೀಡಿದ್ದ ಅವರು ಕೊನೆಯದಾಗಿ ಚಿತ್ರ ಬರೆದದ್ದು ಏ.30 ರಂದು. ಜನತಾ ಕಫ್ರ್ಯೂ ಕುರಿತಾದ ವಿಡಂಬನಾತ್ಮಕ ವ್ಯಂಗ್ಯಚಿತ್ರವನ್ನು ಶಿವಮೊಗ್ಗದ ಕ್ರಾಂತಿದೀಪ ಪ್ರಾದೇಶಿಕ ಪತ್ರಿಕೆಗಾಗಿ ಬರೆದಿದ್ದರು. ಈ ಚಿತ್ರದ ಬಳಿಕ ಮತ್ತೆ ಬರೆಯದ ಅವರು ಬಾರದ ಲೋಕಕ್ಕೆ ಹೋಗಿ ವ್ಯಂಗ್ಯಚಿತ್ರರಂಗವನ್ನು ಬಡವಾಗಿಸಿದ್ದಾರೆ. ಗಂಗಾಧರ್ ಅವರ ಕೈಯಲ್ಲಿ ಮೂಡುತಿದ್ದ ಚಿತ್ರಗಳು ಅತ್ಯಂತ ವಿಶಿಷ್ಟ ಹಾಗೂ ಗಮನ ಸೆಳೆಯುವಂತಿರುತ್ತಿದ್ದವು, ಈ ಕಾರಣದಿಂದಲೇ ಅವರು ಈ ರಂಗದಲ್ಲಿ ಪ್ರಖ್ಯಾತರಾಗಿದ್ದರು.
ಕೊರೊನ ಒಂದನೇ ಅಲೆಯ ಸಂದರ್ಭದಲ್ಲಿಯೂ ಅವರು ಕೊರೊನ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಬರೆದಿದ್ದ ಚಿತ್ರಗಳನ್ನು ಬೆಂಗಳೂರು ಬಿಬಿಎಂಪಿ ಸಹ ಬಳಸಿಕೊಂಡಿತ್ತು. ಈ ವರ್ಷವೂ ಕೊರೊನ ಬಗ್ಗೆ ಎಚ್ಚರದಿಂದಿರಿ ಎಂದು ಜನತೆಗೆ ಹೇಳುತಿದ್ದ ಅವರು ಅದೇ ಕ್ರೂರಿ ಕೊರೋನದಿಂದಾಗಿ ಇಹಲೋಕ ತ್ಯಜಿಸಿರುವುದು ವಿಧಿ ಆಟ.