ಮಲೆನಾಡಿನ ಜೀವಾಳವಾದ ಮೆಗ್ಗಾನ್ ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯ ಹೆಚ್ಚಿಸಿ ಆಗುತ್ತಿರುವ ಸಾವು ನೋವು ನಿಯಂತ್ರಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಈಗಿರುವ ೩೨ ವೆಂಟಿಲೇಟರ್ ಸಂಖ್ಯೆಯನ್ನು ಕನಿಷ್ಠ ೨೦೦ ಕ್ಕೆ ಏರಿಸಬೇಕು. ೩೮ ಇರುವ ಹೆಚ್.ಎಸ್.ಎನ್.ಸಿ.,ಗಳ ಸಂಖ್ಯೆಯನ್ನು ೩೦೦ ಕ್ಕೆ ಏರಿಸಬೇಕು, ಆಮ್ಲಜನಕ ಕೊರತೆ ನೀಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೊರತೆ ಇರುವ ವೈದ್ಯರ ಸಂಖ್ಯೆ ಹೆಚ್ಚಿಸಬೇಕು, ಇರುವ ವೈದ್ಯರು ನಿಯಮಿತವಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಬೇಕು. ಪ್ಯಾರಾ ಮೆಡಿಕಲ್ ಹಾಗೂ ಲ್ಯಾಬ್ ಟೆಕ್ನಿಷಿಯನ್‌ಗಳ ಸಂಖ್ಯೆ ಹೆಚ್ಚಿಸಬೇಕು. ಮುಖ್ಯವಾಗಿ ಸಿಮ್ಸ್ ನಿರ್ದೇಶಕರನ್ನು ಕೂಡಲೇ ಬದಲಾಯಿಸಬೇಕು. ವಯೋವೃದ್ಧರಾಗಿರುವ ಇವರಿಂದ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಸ್ಥಾನಕ್ಕೆ ಕೆಎಎಸ್ ಗ್ರೇಡ್‌ನ ದಕ್ಷ ಅಧಿಕಾರಿಯೊಬ್ಬರನ್ನು ನೇಮಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ.
ಸಿಬ್ಬಂದಿ ಕೊರತೆ
ಜಿಲ್ಲಾ ಆಸ್ಪತ್ರೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ನೀಡಬೇಕು. ವಾರಕ್ಕೊಮ್ಮೆ ಕೊರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಉನ್ನತಮಟ್ಟದ ಸಭೆ ನಡೆಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಅಕ್ಕ ಪಕ್ಕದ ಜಿಲ್ಲೆಯಿಂದ ರೋಗಿಗಳು ಬರುತ್ತಿರುವುದರಿಂದ ಸ್ಥಳೀಯರಿಗೆ ಆಕ್ಸಿಜನ್, ವೆಂಟಿಲೇಟರ್ ಲಭ್ಯವಿರುವುದಿಲ್ಲ. ಜೊತೆಗೆ ಸಿಬ್ಬಂದಿ ಕೊರತೆಯೂ ಇದೆ. ಹೀಗಾಗಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ವೈದ್ಯರು ಕೆಲಸವನ್ನೇ ಮಾಡುತ್ತಿಲ್ಲ. ಹೊರ ರಾಜ್ಯ ಮತ್ತು ಊರುಗಳಿಂದ ಬಂದವರಿಂದಾಗಿ ಸೋಂಕು ಹೆಚ್ಚುತ್ತಿದೆ. ವಲಸಿಗರನ್ನು ತಪಾಸಣೆ ಮಾಡದೆ ಈ ಎಲ್ಲ ಅದ್ವಾನವಾಗಿದೆ ಎಂದು ಸಂಘಟನೆ ಆರೋಪಿಸಿದೆ. ಒಕ್ಕೂಟದ ಪ್ರಮುಖರಾದ ಕೆ.ಪಿ. ಶ್ರೀಪಾಲ್, ಕೆ.ಟಿ. ಗಂಗಾಧರ್, ಎಂ. ಗುರುಮೂರ್ತಿ, ಪ್ರೊ. ರಾಜೇಂದ್ರ ಚೆನ್ನಿ, ಕೆ.ಎಲ್. ಅಶೋಕ್, ಮಾಲತೇಶ್ ಬೊಮ್ಮನಕಟ್ಟೆ, ಮಂಜುನಾಥ ನವುಲೆ, ಎಂ. ರವಿ, ಶಿವಕುಮಾರ್ ಮತ್ತಿತರರಿದ್ದರು.