ಶಿವಮೊಗ್ಗದಲ್ಲಿ ಬುಧವಾರ ರಾತ್ರಿ ಸುಮಾರು ೧೧ ಕ್ಕೂ ಹೆಚ್ಚು ಕಾರುಗಳ ಗಾಜು ಜಖಂಗೊಳಿಸಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಎಂ.ಕೆ.ಕೆ ರಸ್ತೆ, ಗಾಂಧಿಬಜಾರ್, ಮಂಜುನಾಥ್ ಟಾಕೀಸ್ ರಸ್ತೆಗಳಲ್ಲಿ ಘಟನೆ ನಡೆದಿದ್ದು, ಮನೆ ಮುಂದೆ ಹಾಗೂ ರಸ್ತೆ ಮೇಲೆ ನಿಲ್ಲಿಸಿದ ಕಾರುಗಳನ್ನು ಜಖಂಗೊಳಿಸಲಾಗಿದೆ. ಕಾರು ಮಾತ್ರವಲ್ಲದೆ ಬೈಕ್‌ಗಳಿಗೂ ಹಾನಿ ಮಾಡಲಾಗಿದೆ. ಘಟನೆ ಬಗ್ಗೆ ಎಚ್ಚೆತ್ತ ಸಾರ್ವಜನಿಕರು ಕೃತ್ಯ ನಡೆಸುವಾಗಲೇ ಇಬ್ಬರು ಯುವಕರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗಾಂಜಾದ ಅಮಲಿನಲ್ಲಿ ಕೃತ್ಯ ಎಸಗಿರಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಲಕ್ಷ್ಮೀಪ್ರಸಾದ್, ಹೆಚ್ಚುವರಿ ಎಸ್ಪಿ ಶೇಖರ್ ತನಿಖೆಗೆ ತಂಡ ರಚಿಸಿದ್ದಾರೆ. ಕೋವಿಡ್ ಆತಂಕದ ಸಮಯದಲ್ಲಿ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ಸಚಿವ ಈಶ್ವರಪ್ಪ, ಈ ಘಟನೆಯಲ್ಲಿ ಮುಸ್ಲಿಂ ದುಷ್ಕರ್ಮಿಗಳ ಭಾಗಿಯಾಗಿರುವ ಶಂಕೆ ಇದೆ. ಸೆರೆ ಸಿಕ್ಕ ಹುಡುಗರೂ ಅದೇ ಸಮುದಾಯಕ್ಕೆ ಸೇರಿದವರಾಗಿದ್ದು, ಶಿವಮೊಗ್ಗದಲ್ಲಿ ಶಾಂತಿ ಕದಡುವ ಉದ್ದೇಶ ಈ ಘಟನೆ ಹಿಂದೆ ಇದೆಯಾ ಎಂಬ ಅನುಮಾನ ಬಂದಿದೆ. ಘಟನೆ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಹಿಂದೆಯೂ ಬೈಕ್ ಜಖಂ ಮಾಡುವ ಕೃತ್ಯ ಎಸಗಲಾಗಿತ್ತು. ಕೋವಿಡ್‌ನಿಂದ ಜನರು ತತ್ತರಿಸಿದ್ದಾರೆ. ಇಂತಹ ಹೊತ್ತಲ್ಲಿ ಕಿಡಿಗೇಡಿಗಳ ಜನರ ಆಸ್ತಿಪಾಸ್ತಿ ನಷ್ಟ ಮಾಡಿದ್ದಾರೆ. ಇದರ ಯಾರೇ ಇದ್ದರೂ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ.ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿ ಈ ನಿಟ್ಟಿನಲ್ಲಿ ನೂತನ ರಕ್ಷಣಾಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಸಚಿವರು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು, ಇದು ಬರೀ ಕುಡಿತದ ಅಮಲೊ, ಅಥವಾ ಗಾಂಜಾ ಅಮಲಿನಲ್ಲಿ ಮಾಡಿದ ಘಟನೆ ಅಲ್ಲ. ಉದ್ದೇಶಪೂರ್ವಕ ಕೃತ್ಯ ಎಂಬುದಾಗಿ ಕಂಡುಬರುತ್ತಿದೆ. ಜನ ಸಂಕಷ್ಟದಲ್ಲಿರುವುವಾಗ ಈ ರೀತಿಯ ಕೃತ್ಯದಿಂದ ಮತೀಯ ಭಾವನೆ ಕೆರಳಿಸುವ ಹುನ್ನಾರ ಇದ್ದರೂ ಇರಬಹುದು. ರಕ್ಷಣಾಧಿಕಾರಿಗೆ ಮಾತನಾಡಿದ್ದೇನೆ. ಘಟನೆ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮವಾಗಬೇಕು ಎಂದು ಹೇಳಿದರು.