ಕೇಂದ್ರ ಸರ್ಕಾರ ರಸಗೊಬ್ಬರದ ಸಹಾಯಧನವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಉತ್ಪಾದಕ ಸಂಸ್ಥೆಗಳು ಪರಿಷ್ಕೃತ ಸಹಾಯಧನದ ಬಳಿಕ ಗರಿಷ್ಟ ಮಾರಾಟ ದರವನ್ನು ಪ್ರಕಟಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಅವರು ತಿಳಿಸಿದ್ದಾರೆ.
ರಸಗೊಬ್ಬರ ಉತ್ಪಾದಕ ಸಂಸ್ಥೆಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ಎಪ್ರಿಲ್ 1 ರಿಂದ ಅನ್ವಯವಾಗುವಂತೆ ರಸಗೊಬ್ಬರ ದರ ಹೆಚ್ಚಿಸಿದ್ದವು. ಇದೀಗ ಸಹಾಯಧನ ಹೆಚ್ಚಳದ ಬಳಿಕ ಇಫ್ಕೋ ಸಂಸ್ಥೆಯು ಪ್ರತಿ 50ಕೆಜಿ ಚೀಲದ ಡಿ.ಎ.ಪಿ 1200ರೂ, 10:26:26 ಕ್ಕೆ ರೂ. 1175, 20:20:0:13 ಕ್ಕೆ ರೂ. 975, 15:15:15 ಕ್ಕೆ 1025 ಮತ್ತು 12:32:16ಕ್ಕೆ ರೂ. 1185 ದರ ನಿಗದಿಪಡಿಸಿರುತ್ತದೆ.
ರೈತರು ಪರಿಷ್ಕೃತ ದರದಂತೆ ರಸಗೊಬ್ಬರ ಖರೀದಿಸಲು ಹಾಗೂ ಮಾರಾಟಗಾರರು ಅದೇ ದರದಲ್ಲಿ ಮಾರಾಟ ಮಾಡಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಲು ಅವರು ಕೋರಿದ್ದಾರೆ.