ಮಲೆನಾಡೆಂದರೆ ಅದು ಆತಿಥ್ಯಕ್ಕೆ ಹೆಸರುವಾಸಿ.ಕೊರೊನ ಸಂದರ್ಭದಲ್ಲಿ ಇದು ಮತ್ತೊಮ್ಮೆ ಸಾಬೀತಾಗುತ್ತಿದೆ. ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಅನೇಕ ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳು ಸಾಮಾಜಿಕ ಕಾರ್ಯಕರ್ತರು ತಮ್ಮದೇ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೆಲವರು ರಾಜಕೀಯ ಆಕಾಂಕ್ಷೆ ಇಟ್ಟುಕೊಂಡು ಸಮಾಜ ಸೇವೆಗೆ ಮುಂದಾಗಿದ್ದರೆ, ಮತ್ತೆ ಕೆಲವು ಜನ ಹಾಗೂ ಸಂಘಟನೆಗಳು ನಿಸ್ವಾರ್ಥದಿಂದ ಸೇವೆ ಮಾಡುತ್ತಾ ಕೊರೊನ ಕಂಟಕದಿಂದ ಮುಕ್ತರಾಗಲು ಶ್ರಮಿಸುತ್ತಿದ್ದಾರೆ.
ಸೇವಾಭಾರತಿ ಸೇರಿದಂತೆ ಅನೇಕ ಸಂಘಟನೆಗಳ ಬಲದಿಂದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನೂರು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆದಿದ್ದಾರೆ. ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿಯೂ ಈ ರೀತಿಯ ಸಾರ್ಥಕ ಕೆಲಸ ನಡೆಯುತ್ತಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು ಕೋವಿಡ್ ಕೇರ್ ಸೆಂಟರ್‍ಗೆ ಆಹಾರ ಧಾನ್ಯ ನೆರವು ನೀಡಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯೂ ಆಂಬ್ಯುಲೆನ್ಸ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಹಲವು ಪರಿಕರಗಳನ್ನು ಸರಕಾರಿ ಮೆಡಿಕಲ್ ಕಾಲೇಜಿಗೆ ನೀಡುವ ಮೂಲಕ ನೆರವು ನೀಡಿದೆ. ಎಸ್.ಪಿ.ದಿನೇಶ್ ಸಾರಥ್ಯದ ಪದವೀಧರ ಸಹಕಾರ ಸಂಘವು ನೆರವಿನ ಹಸ್ತ ಚಾಚಿದೆ. ಭದ್ರಾವತಿ ಬಿಜೆಪಿ ಘಟಕವೂ ತನ್ನ ನೆಲೆಯಲ್ಲಿ ಆಹಾರ ಸಾಮಗ್ರಿ, ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ.
ಎನ್.ಎಸ್.ಯು.ಐ
ಕಾಂಗ್ರೆಸ್‍ಪಕ್ಷದ ವಿದ್ಯಾರ್ಥಿಘಟಕವಾದ ಎನ್.ಎಸ್.ಯು.ಐ.ದೇಶಾದ್ಯಂತ ಸಮಾಜಮುಖಿ ಕೆಲಸ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಯುವ ಕಾಂಗ್ರೆಸ್‍ವತಿಯಿಂದ ಕಳೆದ 26 ದಿನಗಳಿಂದ ಕೊರೊನ ಸಂತ್ರಸ್ಥ ಜನರಿಗೆ ನೆರವು ನೀಡುತ್ತಿದೆ. ಲಾಕ್‍ಡೌನ್‍ನಿಂದ ತೊಂದರೆಗೊಳಗಾದ ನಿರ್ಗತಿಕರಿಗೆ ಊಟ, ಪೊಲೀಸರು, ಆರೋಗ್ಯ ಸಹಾಯಕರು ಸೇರಿದಂತೆ ಕೊರೊನ ವಾರಿಯರ್ಸ್‍ಗೆ ಆಹಾರ ನೀಡುತ್ತಿದೆ.ಕೊರೊನ ಪೀಡಿತರನ್ನು ನೋಡಿಕೊಳ್ಳುತ್ತಿರುವ ಕುಟುಂಬದವರಿಗೆ ಆಶ್ರಯ ಮತ್ತು ಆಹಾರ ನೀಡುತ್ತಿರುವ ಸೇವಾಭಾರತಿ ಸಂಘಟನೆ ಸೇವೆ ಅನನ್ಯವಾಗಿದೆ. ಕೋವಿಡ್ ಸುರಕ್ಷಾ ಪಡೆ ಮತ್ತು ಸೇವಾ ಭಾರತಿ ಸಂಘಟನೆಗಳು ಕೋವಿಡ್ ಆರೈಕೆ ಕೇಂದ್ರದಲ್ಲಿ ಅವಿರತ ಸೇವೆ ಮುಂದುವರಿಸಿವೆ. ಸಂಸ್ಕøತಿ ಫೌಂಡೇಷನ್ ಕೂಡಾ ಈ ದಿಸೆಯಲ್ಲಿ ಕೆಲಸ ಮಾಡುತ್ತಿದೆ.
ಕೋವಿಡ್ ಕೇರ್ ಸೆಂಟರ್‍ಗೆ ಮಲೆನಾಡಿನ ಅನೇಕ ಸಂಘಟನೆಗಳು, ಖಾಸಗಿ ಸಂಸ್ಥೆಗಳು ನೆರವು ನೀಡುತ್ತಿವೆ.
ಶಿವಮೊಗ್ಗ ವಿದ್ಯಾನಗರ ಗೆಳೆಯರ ಬಳಗವು ಮಾಜಿ ಕಾರ್ಪೊರೇಟರ್ ಕಾಶಿವಿಶ್ವನಾಥ್ ಹಾಗೂ ಶ್ರೀಕಾಂತ್ ಕಾಮತ್ ನೇತೃತ್ವದಲ್ಲಿ ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡುತ್ತಿದೆ. ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದ ಸೌರಭ ಸಂಘಟನೆಗಳು ಕೋವಿಡ್ ಪೀಡಿತರಿಗೆ ನೆರವು ನೀಡುತ್ತಿದೆ ಮಾತ್ರವಲ್ಲದೆ, ಅವರದೇ ಆದ ಆಂಬ್ಯುಲೆನ್ಸ್ ಮೂಲಕ ಅಶಕ್ತ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಹಾಕುವ ಕಾಯಕ ಮಾಡುತ್ತಿದೆ. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅವರ ಕುಟುಂಬದ ಹೆಚ್.ಎಂ.ಟ್ರಸ್ಟ್ ಅಡಿಯಲ್ಲಿ ಕೊರೊನ ಸಂತ್ರಸ್ಥರಿಗೆ ನೆರವಿನ ಜತೆಗೆ ನಗರದ ಎಲ್ಲಾ ವಾರ್ಡುಗಳ ಆಯ್ದ ಸ್ಥಳಗಳಲ್ಲಿ ಆಕ್ಷಿಮೀಟರ್ ವ್ಯವಸ್ಥೆ ಮಾಡಿ ಜನರ ದುಗುಡ ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಪತ್ರಕರ್ತ ಶಿ.ಜು.ಪಾಶ ಅವರ ಗೆಳೆಯರ ಬಳಗವೂ ಆಹಾರ ಕಿಟ್ ಮೂಲಕ ಬಡವರ ನೋವಿಗೆ ಸ್ಪಂದಿಸುತ್ತಿದೆ.
ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ಅನೇಕ ಭಾಗಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳು ನೊಂದವರ ನೆರವಿಗೆ ಬಂದಿರುವುದು ಮಲೆನಾಡಿನ ಮಣ್ಣಿನ ಗುಣವಾದ ಆತಿಥ್ಯವನ್ನು ಮತ್ತೊಮ್ಮೆ ರುಜುವಾತು ಮಾಡುತ್ತಿವೆ. ಈ ಎಲ್ಲ ಸಂಘಟನೆಗಳ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.