Malenadu Mitra
ರಾಜ್ಯ

ಗ್ರಾಮಪಂಚಾಯಿತಿ ಹಣ ಖರ್ಚಿನ ನಿಯಮ ಸಡಿಲ: ಸಚಿವ ಈಶ್ವರಪ್ಪ

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯದ ತುರ್ತು ಕಾಮಗಾರಿಗಳಿಗೆ ವ್ಯಯ ಮಾಡಲಾಗುವ ಹಣವನ್ನು ೧೫ನೇ ಹಣಕಾಸಿನ ಅನುದಾನದಲ್ಲಿ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯಿತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಮಂಗಳವಾರ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಕೊರೊನ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬೆಳಗಾಂ ಮತ್ತು ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆಯಾ ಜಿಲ್ಲೆಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಈ ಹಿಂದೆ ಸದರಿ ಅನುದಾನವನ್ನು ಬಳಸಿಕೊಳ್ಳಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆಯಬೇಕಾಗಿತ್ತು. ಪ್ರಸ್ತುತ ಸಂದರ್ಭದಲ್ಲಿ ಈ ನಿಯಮವನ್ನು ಸಡಿಲಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿನ ಕಂಟೋನ್ಮೆಂಟ್ ಜೋನ್ ಗಳನ್ನು ಹೊರತುಪಡಿಸಿ ಉಳಿದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದ್ದು ಬೆಳಿಗ್ಗೆ ಮತ್ತು ಮಧ್ಯಾಹ್ನ ೨ರ ಅವಧಿಯಲ್ಲಿ ಸೀಮಿತ ೪೦ ಜನರ ತಂಡಗಳಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದರು.

ನರೇಗ ಸಿಬ್ಬಂದಿಗಳ ಚಿಕಿತ್ಸಾ ವೆಚ್ಚ

ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೊರೋನ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜನರಲ್ ವಾರ್ಡನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ದಿನವೊಂದಕ್ಕೆ ಹತ್ತುಸಾವಿರ, ಹೈಡಿಪೆಂಡೆನ್ಸಿ ಯುನಿಟ್ ನಲ್ಲಿದ್ದರೆ ಹನ್ನೆರೆಡು ಸಾವಿರ, ವೆಂಟಿಲೇಟರ್ ಇಲ್ಲದೆ ತೀವ್ರ ನಿಗಾ ಘಟಕದಲ್ಲಿದ್ದರೆ ಹದಿನೈದು ಸಾವಿರ ಹಾಗೂ ಐಸೊಲೇಶನ್ ಸಹಿತ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿದ್ದರೆ ಇಪ್ಪತ್ತೈದು ಸಾವಿರ ರೂ.ಗಳನ್ನು ನರೇಗಾ ಯೋಜನೆಯ ಶೇ.೬ರ ಆಡಳಿತಾತ್ಮಕ ವೆಚ್ಚದಲ್ಲಿ ಪಾವತಿಸಲು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಅದರ ನಿವಾರಣೆಗೆ ಸಿಇಓ ಅವರಿಂದ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದರು. ಕುಡಿಯುವ ನೀರಿನಲ್ಲಿನ ದೋಷಗಳಿಂದಾಗಿ ಫಂಗಸ್ ಹರಡಿರುವ ಸಂಭವವಿದೆ ಎಂದು ತಜ್ಞರು ವರದಿ ನೀಡಿರುವ ಹಿನ್ನೆಲೆಯಲ್ಲಿ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಸಾರ್ವಜನಿಕರಿಗೆ ಸೂಚಿಸಿದರು. ನಗರಗಳಿಂದ ಬಹುಸಂಖ್ಯಾತರು ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗುತ್ತಿದ್ದಾರೆ. ಅಂತಹ ವ್ಯಕ್ತಿಗಳ ಮೇಲೆ ನಿಗಾ ಇಡಬೇಕಾದ ಅಗತ್ಯವಿದೆ ಎಂದರು.
ವಿಡಿಯೊ ಸಂವಾದದಲ್ಲಿ ಪಂಚಾಯಿತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ವ್ಯಾಪ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒಗಳು ಭಾಗವಹಿಸಿದ್ದರು.

Ad Widget

Related posts

ಅಕ್ಕಿಕೊಡದ ಕೇಂದ್ರದ ವಿರುದ್ಧ ಕಾಂಗ್ರೆಸ್ ನಿರಶನ

Malenadu Mirror Desk

ಮಧ್ಯಕರ್ನಾಟಕದಲ್ಲಿ ಮುಂದುವರಿದ ಬಿಜೆಪಿ ಪ್ರಾಬಲ್ಯ: ಅರುಣ್, ನವೀನ್ ಹಾಗೂ ಪ್ರಾಣೇಶ್ ಆಯ್ಕೆ

Malenadu Mirror Desk

ತುಂಗಾ ತೀರದಲ್ಲಿ ಹನಿಮೂನ್, ಸಂಗಾತಿ ಆಯ್ಕೆ ಹೇಗೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.