ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಖೋಲೋ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ನಿರ್ಮಿಸಲಿರುವ ವಿಶೇಷ ಕ್ರೀಡಾ ತರಬೇತಿ ಕೇಂದ್ರದ ಭೂಮಿ ವಿಶ್ವವಿದ್ಯಾಲಯದ ಹೆಸರಲ್ಲೇ ಇರುತ್ತದೆ. ಭೂಮಿಯನ್ನು ಯಾರಿಗೂ ನೀಡುತ್ತಿಲ್ಲ ಈ ಕುರಿತು ಹೋರಾಟ ನಡೆಸುವವರಿಗೆ ಮಾಹಿತಿ ಕೊರತೆ ಇದ್ದಂತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸಾಯಿ ಖೇಲೋ ಇಂಡಿಯಾದ ಹಬ್ ನಿರ್ಮಾಣಕ್ಕೆ ಸಾಯಿಯವರು ಕೇವಲ ಮಾನವ ಸಂಪನ್ಮೂಲವನ್ನು ಒದಗಿಸುತ್ತಾರೆ. ಕೇವಲ ಮೂರು ನಾಲ್ಕು ತಿಂಗಳು ಸಾಯಿವರು ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ನಂತರ ಉಳಿದ ಅವಧಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಕ್ರೀಡಾಂಗಣವನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಅಲ್ಲದೆ ಈಗಾಗಲೇ ಸಹ್ಯಾದ್ರಿ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಇನ್ನೂ ಪೂರ್ತಿಯಾಗಿಲ್ಲ. ಇನ್ನೂ ಐದಾರು ಕೋಟಿ ರೂಪಾಯಿ ಕ್ರೀಡಾಂಗಣಕ್ಕೆ ಬೇಕಿದೆ, ಈಗಿರುವ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದಿಂದ ಅದ್ಭುತ ಅವಕಾಶವೊಂದು ಸಿಕ್ಕಿದೆ. ನಮ್ಮ ಮಲೆನಾಡಿನ ಮಕ್ಕಳು ಕ್ರೀಡೆಯಲ್ಲಿ ದೊಡ್ಡ ಮಟ್ಟಿಗಿನ ಹೆಸರು ಮಾಡೋದಕ್ಕೆ ಅನುಕೂಲವಾಗಲಿದೆ. ಅಂತಾರಾಷ್ಟ್ರಿಯ ಮಟ್ಟದ ಉಪಕರಣಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅನುಕೂಲವಾಗಲಿದೆ ಎಂದರು.
ಪ್ರತಿಭಟಿಸುತ್ತಿರುವವರನ್ನು ಮನವೊಲಿಸಲಾಗುತ್ತದೆ. ವಿಶೇಷ ಕ್ರೀಡಾ ತರಬೇತಿ ಸಂಸ್ಥೆಗೆ ಎಲ್ಲಿ ಭೂಮಿ ನೀಡಬೇಕೆಂಬುದನ್ನು ಉಸ್ತುವಾರಿ ಸಚಿವರಿ ನಿರ್ಧರಿಸಲಿದ್ದಾರೆ ಎಂದರು.