ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ರಾಷ್ಠ್ರೀಯ ಹೆದ್ದಾರಿಗಳ ಅಭಿವೃದ್ದಿ ಹಾಗು ಸಂಪರ್ಕ ಸೇತುವೆಗಳ ನಿರ್ಮಾಣ ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಮಾಡಿದ ಪ್ರಯತ್ನದ ಫಲವಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ 2020-21 ಮತ್ತು 2021-22 ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ 8500 ಕೋಟಿಗಳ ಅನುದಾನ ಮಂಜೂರಾಗಿ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,605 ಕೋಟಿ ಮೊತ್ತದ 5 ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿ 169 ರ ನಗರದ ಸಂದೇಶ್ ಮೋಟಾರ್ಸ್ ನಿಂದ ಹರಕೆರೆವರೆಗೆ ಪಥದ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 766 ಬೈಂದೂರು ರಾಣೇ ಬೆನ್ನೂರು ರಸ್ತೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ, ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ 640 ಮೀ ಉದ್ದದ ಸೇತುವೆ ಮತ್ತು ಸುತ್ತಾ, ಮಳಲಿ, ಬೆಕ್ಕೋಡಿ, ಗುಡ್ಡೆಕೊಪ್ಪ ಮತ್ತು ಹೆಬ್ಬುರ್ಲಿ ಮಾರ್ಗವಾಗಿ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಿಂಹಧಾಮದಿಂದ ಆನಂದಪುರ ವರೆಗೆ ಕುಂಸಿ ಗ್ರಾಮದ ಬೈಪಾಸ್ ರಸ್ತೆ ನಿರ್ಮಾಣ ಒಳಗೊಂಡಂತೆ ಒಟ್ಟು 39 ಕಿ.ಮೀ ಉದ್ದದ 4 ಪಥದ ರಸ್ತೆ ನಿರ್ಮಾಣ 325 ಕೋಟಿ ರೂ., ಹೊಳೆಹೊನ್ನೂರು ಬಳಿಯ ಪುರಾತನವಾದ ಭದ್ರಾ ಸೇತುವೆ ದುರಸ್ಥಿಗೊಳಿಸಲು 2 ಕೋಟಿ ಬಿಡುಗಡೆಯಾಗಿದೆ ಎಂದರು.
ತೀರ್ಥಹಳ್ಳಿಯಲ್ಲಿ ಹೊಸ ಸೇತುವೆ
ಐದು ಯೋಜನೆಗಳಿಗೆ ಡಿಪಿಆರ್ ತಯಾರಿಸಲು 5.30 ಕೋಟಿ ರೂ. ಬಿಡುಗಡೆಯಾಗಿದೆ. ಇವುಗಳಲ್ಲಿ ಕುಂಸಿ, ಆನಂದಪುರ, ಹೊಸೂರು, ತಾಳಗುಪ್ಪದಲ್ಲಿ ರೈಲ್ವೆ ಲೆವೆಲ್ ಕ್ರಾಸ್ಸಿಂಗ್ ಬದಲಾಗಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಶಿವಮೊಗ್ಗ ಬೈಪಾಸ್‍ನಲ್ಲಿ ಇನ್ನೊಂದು ಸೇತುವೆ ನಿರ್ಮಾಣ, ತಿರ್ಥಹಳ್ಳಿ ಪಟ್ಟಣ ವ್ಯಾಪ್ತಿಯಲ್ಲಿ ಹಳೆ ಸೇತುವೆ ಬದಲಿಗೆ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದರು.
ಎನ್‍ಡಿಎ ಸಾಧನೆ
2020-21ನೇ ಸಾಲಿನಲ್ಲಿ 7234.31 ಕೋಟಿ ರೂ. ಮೊತ್ತದ 10 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಜಿಲ್ಲೆಗೆ ಇನ್ನೊಂದು ಕೇಂದ್ರೀಯ ವಿದ್ಯಾಲಯ ಕೇಳಿದ್ದು, ಅದಕ್ಕೆ ಭೂಮಿ ನೀಡುವಂತೆ ಕೇಂದ್ರದಿಂದ ಪತ್ರ ಬಂದಿದೆ. ಭದ್ರಾವತಿ ಬಳಿ ಭೂಮಿ ಗುರುತಿಸಲಾಗುತ್ತದೆ. ಜಿಲ್ಲೆಗೆ 3 ನೇ ಕೇಂದ್ರೀಯ ವಿದ್ಯಾಲಯವನ್ನು ಕೇಳಲಾಗಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು. ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಎಂಎಲ್‍ಸಿ ಎಸ್. ರುದ್ರೇಗೌಡ, ಮುಖಂಡರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಎಸ್.ಎನ್. ಚನ್ನಬಸಪ್ಪ, ಕೆ.ಪಿ. ಪರುಷೋತ್ತಮ್ ಮೇಯರ್ ಸುನೀತ ಅಣ್ಣಪ್ಪ, ಪವಿತ್ರ ರಾಮಯ್ಯ, ಗನ್ನಿ ಶಂಕರ್, ಎನ್.ಡಿ. ಸತೀಶ್ ಮೊದಲಾದವರು ಇದ್ದರು.
ಸ್ವಾತಂತ್ಯ ಬಂದು ಇಷ್ಟು ವರ್ಷಗಳಲ್ಲಿ ಯುಪಿಎ ಸರ್ಕಾರದ ದೀರ್ಘ ಆಳ್ವಿಕೆಯ ಅವಧಿಯಲ್ಲಿ 69 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಆದರೆ ಎನ್‍ಡಿಎ ಅವಧಿಯಲ್ಲಿ 81 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಇದು ಬಿಜೆಪಿಯ ಸಾಧನೆ
– ಬಿ.ವೈ. ರಾಘವೇಂದ್ರ,ಸಂಸದ