ಕೊರೊನಾ ಸೋಂಕಿನಿಂದ ಮರಣ ಹೊಂದಿದವರು ಮತ್ತು ಸೋಂಕಿತರ ವಿಷಯದಲ್ಲಿ ಸುಳ್ಳು ಅಂಕಿ ಅಂಶಗಳನ್ನು ಜಿಲ್ಲಾಡಳಿತ ನೀಡುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಸಾವಿನ ಸಂಖ್ಯೆಯನ್ನ ಕಡಿಮೆ ತೋರಿಸುತ್ತಿದೆ ಮತ್ತು ಖಾಸಗಿ ಆಸ್ಪತ್ರೆಗಳ ಪರವಾಗಿ ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಶೇ.೫೦ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂಬ ನಿಯಮವನ್ನೇ ಖಾಸಗಿ ಆಸ್ಪತ್ರೆಗಳು ಮೀರಿವೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸದೆ ಲಸಿಕೆಯನ್ನು ನೀಡದೆ ಜನರಿಗೆ ಸಂಪೂರ್ಣ ಮೋಸ ಮಾಡಿದೆ ಸ್ವಂತ ಲಾಭಕ್ಕಾಗಿ ದೇಶದ ಜನರನ್ನು ಬಲಿ ಕೊಟ್ಟಿದ್ದಾರೆ. ಇದುವರೆಗೂ ಶೇ.೩.೧೭ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಮೊದಲ ಹಂತದಲ್ಲಿ ೨೦ ಕೋಟಿ ಜನರಿಗೆ ೨ನೇ ಹಂತದಲ್ಲಿ ೪.೩೭ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ೧೪೦ಕೋಟಿ ಇರುವ ಭಾರತದಂತಹ ದೇಶಕ್ಕೆ ಇದು ಸಾಕಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿದರು.
ಹೀಗಿದ್ದು, ಭಾರತ ಸರ್ಕಾರ ೮ಕೋಟಿ ಲಸಿಕೆಯನ್ನು ಹೊರದೇಶಗಳಿಗೆ ನೀಡಿತ್ತು. ದೇಶದ ಎಲ್ಲಾ ಜನರಿಗೂ ಉಚಿತವಾಗಿಯೇ ಲಸಿಕೆ ನೀಡಬೇಕು. ಆದರೆ ಭಾರತ ಸರ್ಕಾರ ಮಾತ್ರ ಲಸಿಕೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿ ಅನೇಕ ಜನರ ಸಾವಿಗೆ ಕಾರಣವಾಗಿದೆ. ಹಾಗಾಗಿ ಇದೊಂದು ಮಾನವೀಯತೆ ಇಲ್ಲದ ಕೊಲೆಗಡುಕ ಸರ್ಕಾರ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಕರ್ನಾಟಕ ಸರ್ಕಾರವಂತು ಲಸಿಕೆ ನೀಡುವುದಕ್ಕಿಂತ ಲಾಕ್‌ಡೌನ್ ಬಗ್ಗೆಯೇ ಹೆಚ್ಚು ಕಾಳಜಿವಹಿಸುತ್ತಿದೆ. ಕೇವಲ ಲಾಕ್‌ಡೌನ್ ಮಾಡುವುದರಿಂದ ನಿಯಂತ್ರಣ ಸಾಧ್ಯವಿಲ್ಲ. ಪ್ರತಿದಿನ ಕೊನೆಪಕ್ಷ ದೇಶದಲ್ಲಿ ೧ಕೋಟಿ ಜನರಿಗಾದರೂ ಲಸಿಕೆ ಹಾಕಬೇಕಾಗಿದೆ. ಒಟ್ಟಾರೆ ಇನ್ನು ೩೦೦ ಕೋಟಿ ಡೋಸ್ ಲಸಿಕೆ ಬೇಕಾಗಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನತ್ತ ಯೋಚಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ,ಮುಖಂಡರಾದ ಎಸ್.ಪಿ.ದಿನೇಶ್,ಶಬ್ಬೀರ್‌ಖಾನ್,ವಿಶ್ವನಾಥಕಾಶಿ,ಎಂ.ಚಂದನ್,ಚಂದ್ರಶೇಖರ್,ಬಾಲಾಜಿ, ಎನ್.ಡಿ.ಪ್ರವೀಣ್, ಇನ್ನಿತರರು ಉಪಸ್ಥಿತರಿದ್ದರು.
ಮೇಯರ್ ಡಮ್ಮಿಯಾಗಿದ್ದಾರೆ
ಈಗಿನ ಮೇಯರ್ ಸುನಿತಾ ಅಣ್ಣಪ್ಪ ಮತ್ತು ಉಪ ಮೇಯರ್ ಶಂಕರ್‌ಗನ್ನಿ ಡಮ್ಮಿಯಾಗಿದ್ದಾರೆ ಎಂದು ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಸಿ ಕಿಟ್ ನೀಡುವಿಕೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿರುವುದು ಶಿಷ್ಟಾಚಾರಕ್ಕೆ ವಿರೋಧವಾಗಿದೆ. ಏಕೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ ೪೫ ಸಾವಿರ ದಿನಸಿ ಕಿಟ್ ಕೊಡುತ್ತಿರುವುದು ಬಿಜೆಪಿ ಪಕ್ಷದಿಂದ ಅಲ್ಲ. ಅದು ಮಹಾನಗರ ಪಾಲಿಕೆಯಿಂದ ಆದರೆ ಇವರು ತಮ್ಮ ಪಕ್ಷದಿಂದಲೆ ಕಿಟ್ ಕೊಡುತ್ತೇವೆ ಎಂಬ ಭ್ರಮೆಯಿಂದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಅದಲ್ಲದೆ ಅನೇಕ ಬಾರಿ ಮೇಯರ್ ಬದಲು ಚನ್ನಬಸಪ್ಪನವರೆ ಪತ್ರಿಕಾಗೋಷ್ಠಿಗಳು ಮಾಡುತ್ತಿರುವುದರಿಂದ ಅವರು ಡಮ್ಮಿಯಾಗಿದ್ದಾರೆ ಎಂದು ಟೀಕಿಸಿದರು.