ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಆಡಳಿತ ಮಂಡಳಿಯು ಕೊವಿಡ್ ಸಂಕಷ್ಟದ ಕಾಲದಲ್ಲಿ ಕರೂರು ಮತ್ತು ಬಾರಂಗಿ ಹೋಬಳಿಯಲ್ಲಿ ಕೋವಿಡ್ ವಾರಿಯರ್‍ಸ್ ಮತ್ತು ಬಡಜನರ ನೆರವಿಗೆ ನಿಂತಿದೆ. ಕಳೆದ ಒಂದು ವಾರದಿಂದ ಕ್ಷೇತ್ರದವತಿಯಿಂದ ಪಂಚಾಯಿತಿ ಕಟ್ಟಡಕ್ಕೆ ಸ್ಯಾನಿಟೈಸೇಷನ್, ಕೊರೊನ ಸೇವಾನಿರತ ದಾದಿಯರು, ಪೊಲೀಸರು, ಆಶಾ ಕಾರ್ಯಕರ್ತೆಯರಿಗೆ ಸುರಕ್ಷತಾ ಕಿಟ್ ನೀಡುವ ಮೂಲಕ ಮುಂಚೂಣಿ ವಾರಿಯರ್‍ಸ್ ಸೇವೆಗೆ ಪ್ರೋತ್ಸಾಹಿಸುತ್ತಿದೆ.
ಲಾಕ್‌ಡೌನ್ ಅವಧಿಯಲ್ಲಿ ಪ್ರತಿದಿನವೂ ಆರೋಗ್ಯ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಉಚಿತ ಊಟ ನೀಡುತ್ತಿರುವುದಲ್ಲದೆ, ದೇವಸ್ಥಾನದ ವತಿಯಿಂದಲೇ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಅದೇ ರೀತಿ ಸೋಮವಾರ ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ ಅವರ ಮಾರ್ಗದರ್ಶನದಲ್ಲಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು, ತುಮರಿ ಪಂಚಾಯಿತಿ ವ್ಯಾಪ್ತಿಯ ಶೋಂಕಿತರ ಅವಲಂಭಿತರು ಮತ್ತು ಬಡಕುಟುಂಬಗಳಿಗೆ ಆಹಾರ ಕಿಟ್ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭ ದೇವಸ್ಥಾನದ ಸಿಬ್ಬಂದಿ ಹಾಗೂ ಸ್ಥಳೀಯರಿದ್ದರು.