ಶಿವಮೊಗ್ಗ: ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರ ನಿವೇಶನ ನೀಡುವಂತೆ ಒತ್ತಾಯಿಸಿ ಸಂತ್ರಸ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
2007 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ನಿವೇಶನ ನೀಡುವುದಾಗಿ ತಿಳಿಸಿದ್ದರು. ಅವರ ಭರವಸೆಯ ಮೇರೆಗೆ ರೈತರು ತಮ್ಮ ಭೂಮಿಯನ್ನು ಬಿಟ್ಟುಕೊಟ್ಟಿದ್ದೆವು. ಆದರೆ ಈ ವರೆಗೆ ನಿವೇಶನ ನೀಡಿಲ್ಲ ಎಂದು ಸಂತ್ರಸ್ತ ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಇತ್ತೀಚೆಗೆ ಅಂದರೆ 2020 ಆಗಸ್ಟ್ 24 ರಂದು ಜಿಲ್ಲಾಧಿಕಾರಿಗಳು ಸಭೆ ನಡೆಸಿ 2 ತಿಂಗಳ ಒಳಗಾಗಿ ನಿವೇಶನ ನೀಡುವುದರ ಜತೆಗೆ ಹಕ್ಕುಪತ್ರವನ್ನು ಸಹ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಸುಮಾರು 9 ತಿಂಗಳೇ ಕಳೆದರೂ ಜಿಲ್ಲಾಧಿಕಾರಿ ನೀಡಿದ ಭರವಸೆ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಅಂದು ತಮ್ಮ ಸರ್ವಸ್ವವೇ ಆಗಿದ್ದ ಭೂಮಿಯನ್ನು ಬಿಟ್ಟುಕೊಟ್ಟಿರುವ ಫಲವಾಗಿ ಇಂದು ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದೆ. ಆದರೆ ಭೂಮಿ ನೀಡಿದ ರೈತರನ್ನೇ ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಂತ್ರಸ್ತರು ಪ್ರಶ್ನಿಸಿದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೇದಾ ವಿಜಯ್‌ಕುಮಾರ್, ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷರಾದ ಆರ್.ವಿಜಯಕುಮಾರ್, ಸೋಗಾನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಕುಮಾರ್.ಜಿ, ಸದಸ್ಯರಾದ ಗೋವಿಂದರಾಜು, ಹೇಮೇಶ್ ನಾಯ್ಕ್, ರಾಜಶೇಖರ್, ಮುಖಂಡರಾದ ತಂಗವೇಲು, ಅರುಣ್ ನಾಯ್ಡು, ಪುಟ್ಟರಾಜು, ಗಣೇಶ್, ತಂಗವೇಲು, ಪ್ರಸಾದ್, ಮೂರ್ತಿ, ಗೋವಿಂದ್, ರಮೇಶ್ ನಾಯ್ಕ್ ಹಾಗೂ ಸಂತ್ರಸ್ತರು ಇದ್ದರು.
‘‘ನಿಮಗೆ ನಿವೇಶನ ನೀಡುವುದು ನನ್ನ ಜವಬ್ದಾರಿ. ನನ್ನ ಮೇಲೆ ನಂಬಿಕೆ ಇಡಿ. ಯಾವುದೇ ಕಾರಣಕ್ಕು ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ
-ಬಿ.ಎಸ್.ಯಡಿಯೂರಪ್ಪ ‘ಮುಖ್ಯಮಂತ್ರಿ