Malenadu Mitra
ರಾಜ್ಯ ಶಿವಮೊಗ್ಗ

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಗೌತಮಪುರ ಸಮೀಪದ ಕಣ್ಣೂರಿನ ಬಚ್ಚಲುಮನೆಯಲ್ಲಿ ಕಚ್ಚಾಬಾಂಬ್ ಸ್ಫೋಟಗೊಂಡಿದ್ದ ಪ್ರಕರಣದ ಹಿಂದೆ ಕೊಲೆಯ ಸಂಚಿತ್ತೆ ? ಎಂಬ ಅನುಮಾನ ವ್ಯಕ್ತವಾಗಿದೆ. ಹೌದು!. ಕಣ್ಣೂರಿನ ಬಾಂಬ್ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿ ವಿಚಾರವಾಗಿ ನಡೆಯುತ್ತಿರುವ ದಾಯಾದಿ ಕಲಹವೇ ಈ ಪ್ರಕರಣದ ಮೂಲ ಎನ್ನಲಾಗಿದೆ.
ಪೊಲೀಸ್ ತನಿಖೆಯ ದಿಕ್ಕು ತಪ್ಪಿಸುವ ಮಾದರಿಯಲ್ಲಿ ಚಾಲಾಕಿ ವ್ಯಕ್ತಿಗಳೇ ಈ ಬಾಂಬ್‍ಗಳನ್ನು ಬಚ್ಚಲುಮನೆಯ ಒಲೆಯಲ್ಲಿಟ್ಟಿದ್ದಾರೆ. ಒಲೆಗೆ ಬೆಂಕಿಹೊತ್ತಿಸುವವರು ಸಾವಗೀಡಾಗಲಿ ಎಂದೇ ನೀರೊಲೆಗೆ ಕಚ್ಚಾ ಬಾಂಬ್ ತುಂಬಲಾಗಿತ್ತು ಎಂಬ ಅನುಮಾನ ಘಟನೆ ಬೆನ್ನು ಹತ್ತಿರುವ ಪೊಲೀಸರನ್ನು ಕಾಡುತ್ತಿದೆ.
ಘಟನೆ ವಿವರ
ಜೂನ್ 12 ರಂದು ಕಣ್ಣೂರಿನ ಕೆರಿಯಪ್ಪ(75) ಎಂದಿನಂತೆ ಮನೆಯ ಬಚ್ಚಲುಮನೆ ಒಲೆಗೆ ಬೆಂಕಿ ಹೊತ್ತಿಸಿ ಹೊರಗೆ ಬಂದ ನಿಮಿಷಾರ್ಧದಲ್ಲಿ ನಾಡಬಾಂಬ್‍ಗಳು ಸ್ಫೋಟಗೊಂಡಿವೆ. ಕೆಲ ನಿಮಿಷ ಅವರು ಅಲ್ಲಿಯೇ ಇದ್ದಿದ್ದರೆ ಸ್ಥಳದಲ್ಲಿಯೇ ಸಾವಿಗೀಡಾಗುವ ಸಂಭವವಿತ್ತು. ಹಿಂದಿನ ದಿನ ಅದೇ ಬಚ್ಚಲು ಮನೆಯಲ್ಲಿ ನೀರು ಕಾಯಿಸಿಕೊಂಡು ಸ್ನಾನ ಮಾಡಿದ್ದಾರೆ. ಆದರೆ ಈಗ ಏಕಾಏಕಿ ಸ್ಫೋಟಗೊಂಡಿದ್ದರಿಂದ ವೃದ್ದ ಕೆರಿಯಪ್ಪ ಆಘಾತಕ್ಕೊಳಗಾಗಿದ್ದರು. ಸಾಲದೆಂಬಂತೆ ಮನೆಯ ಆವರಣದಲ್ಲಿರುವ ತೆಂಗಿನ ಮರದ ಬುಡದಲ್ಲಿ 5 ಜೀವಂತ ನಾಡಬಾಂಬ್‍ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಪತ್ತೆಯಾಗಿತ್ತು. ಅದೃಷ್ಟವಶಾತ್ ಅಂದು ಕೆರಿಯಪ್ಪ ಹೊರತಾಗಿ ಮನೆಯಲ್ಲಿ ಓಡಾಡುವವರು ಯಾರೂ ಇರಲಿಲ್ಲ. ಘಟನೆ ಬಳಿಕ ಸ್ಥಳಕ್ಕೆ ಪೋಲಿಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ಭೇಟಿ ನೀಡಿ ತನಿಖೆ ಮುಂದುವರಿಸಿದ್ದರು.
ಆಸ್ತಿವಿವಾದದ ನಂಟು
ಕಣ್ಣೂರಿನ ಕೆರಿಯಪ್ಪರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬ ಮಗ ಸರಕಾರಿ ನೌಕರರಾಗಿದ್ದು, ಮತ್ತೊಬ್ಬ ಮನೆಯಲ್ಲಿದ್ದಾರೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗಿದೆ. ಈ ಕುಟುಂಬದಲ್ಲಿ ಸಹೋದರರ ನಡುವೆ ಜಮೀನು ವ್ಯಾಜ್ಯವಿದೆ. ಆಸ್ತಿ ಭಾಗ ಮಾಡುವ ವಿಚಾರದಲ್ಲಿ ಸ್ಥಳೀಯವಾಗಿ ಸಾಕಷ್ಟು ಪಂಚಾಯಿತಿ ನಡೆದಿದ್ದರೂ ಬಗೆಹರಿದಿಲ್ಲ. ಸುಮಾರು 12 ಎಕರೆ ನೀರಾವರಿ ಭೂಮಿ ಇದ್ದರೂ, ಸಾಗುವಳಿ ಮಾಡದೆ ಹಾಳು ಬಿಡಲಾಗಿದೆ. ಹಿರಿಯ ಸಹೋದರ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ. ತಂದೆ -ತಾಯಿ ಸೋದರಿಯರು ಮತ್ತು ತಮ್ಮ ಮೇಲೆ ದೌರ್ಜನ್ಯ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಕಿರಿಯ ಸಹೋದರ ರವಿ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಪೊಲಿಸ್ ದೂರುಗಳೂ ದಾಖಲಾಗಿವೆ.
2 ಸಲ ಐಜಿಗೆ ದೂರು, ಇನ್ನೂ ಕಾಣದ ಪರಿಹಾರ
ಕೆರಿಯಪ್ಪ ತುಂಬಾ ಕಷ್ಟಪಟ್ಟು ಆಸ್ತಿ ಮಾಡಿದ್ದು, ಮಕ್ಕಳ ಕಾಲದಲ್ಲಿ ಆ ಭೂಮಿಗಾಗಿ ಸಂಘರ್ಷ ನಡೆಯುತ್ತಿದೆ. ಈ ಕಾರಣಕ್ಕಾಗಿ ಭೂಮಿಯ ತಗಾದೆ ಕೋರ್ಟ್ ಮೆಟ್ಟಿಲೇರಿದೆ. ಈ ಆಸ್ತಿವ್ಯಾಜ್ಯ ಹಾಗೂ ಕೌಟುಂಬಿಕ ಕಲಹದ ಕಾರಣಕ್ಕಾಗಿ ಒಟ್ಟು ಆರು ಕೇಸ್‍ಗಳು ದಾಖಲಾಗಿವೆ ಎನ್ನುತ್ತಾರೆ ಕೆರಿಯಪ್ಪರ ಕಿರಿಯ ಮಗ ರವಿ. ತಮ್ಮ ಕುಟುಂಬದ ಮೇಲೆ ಆಗುತ್ತಿರುವ ದೌರ್ಜನ್ಯದ ಸಂಬಂಧ ಒಟ್ಟು 7 ಸಲ ಎಸ್‍ಪಿಯವರಿಗೆ ದೂರು ನೀಡಿದ್ದೇವೆ. 2 ಸಲ ಐಜಿಗೆ ದೂರನ್ನು ನೀಡಿದ್ದೇವೆ. ಆದಾಗ್ಯು ನಾವು ನಿರಂತರ ಕಿರುಕುಳ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ರವಿ.
ಜಿಂಕೆ ಚರ್ಮ, ಕೊಂಬು ಪತ್ತೆ ಕೇಸ್
ಎರಡು ವರ್ಷಗಳ ಹಿಂದೆ ಕೆರಿಯಪ್ಪರ ಕೊಟ್ಟಿಗೆಯ ಅಟ್ಟದ ಮೇಲೆ ಜಿಂಕೆ ಚರ್ಮ, ಕೊಂಬು ಪತ್ತೆಯಾಗಿದ್ದವು. 2 ಸಿಮೆಂಟ್ ಚೀಲದಲ್ಲಿ ವನ್ಯಜೀವಿಯ ಅಂಗಾಂಗ ತಂದಿಟ್ಟು ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಅರಣ್ಯ ಸಿಬ್ಬಂದಿ ಚೀಲ ವಶಪಡಿಸಿಕೊಂಡಿದ್ದು, ದ್ವೇಷದ ಹಿನ್ನೆಲೆಯಲ್ಲಿ ಯಾರೊ ದುಷ್ಕರ್ಮಿಗಳು ಈ ರೀತಿ ಮಾಡಿದ್ದು ಮೇಲ್ಕೋಟಕ್ಕೆ ಸಾಬೀತಾಗಿತ್ತು.
ದ್ವೇಷದ ಬಾಂಬ್ ಸ್ಫೋಟ:
ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಶಿಕಾರಿ ಮತ್ತು ಬೆಳೆಗಳ ರಕ್ಷಣೆಗೆ ಕಚ್ಚಾ ಬಾಂಬ್ ಸಿದ್ಧಪಡಿಸುವ ಮಂದಿ ಇದ್ದಾರೆ. ಅದೇ ರೀತಿಯ ಬಾಂಬ್‍ಗಳನ್ನು ಕೆರಿಯಪ್ಪ ಅವರ ಬಚ್ಚಲುಮನೆಗೆ ತಂದಿಟ್ಟು ಅನಾಹುತ ಸೃಷ್ಟಿಸುವ ಹುನ್ನಾರ ಈ ಪ್ರಕರಣದಲ್ಲಿಯೂ ನಡೆದಿರುವ ಶಂಕೆಯಿದೆ. ಇದೇ ಆರೋಪ ಮಾಡುವ ಕೆರಿಯಪ್ಪ ಕುಟುಂಬ ತಮ್ಮನ್ನು ಕೊಲೆ ಮಾಡುವ ಸಂಚು ಪ್ರಕರಣದ ಹಿಂದಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಕೋವಿಡ್ ಆಸ್ಪತ್ರೆಯಲ್ಲಿದ್ದವರ ಮೇಲೆ ಎಫ್‍ಐಆರ್


ನಾಡಬಾಂಬ್ ಸ್ಫೋಟ ಪ್ರಕರಣದಲ್ಲಿ ವೃದ್ದ ಕೆರಿಯಪ್ಪ ಮತ್ತು ರವಿ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ರವಿ ಅವರು ಕೊರೊನ ಸೋಂಕಿತರಾಗಿ 14 ದಿನದಿಂದ ಚಿಕಿತ್ಸೆ ಪಡೆಯುತಿದ್ದರು. ಜೂ.12 ರಂದು ಸ್ಫೋಟ ಸಂಭವಿಸಿದ ದಿನ ಕೂಡಾ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 14 ದಿನ ಊರಿನಿಂದ ಹೊರಗಿದ್ದ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಜೂ.13 ರಂದು ಮನೆಗೆ ಹೋಗಿದ್ದ ಸಂದರ್ಭ ಪೊಲೀಸರು ಮಹಜರು ನಡೆಸುತ್ತಿದ್ದರು. ಆದರೂ ತಂದೆ ಮಗನ ಮೇಲೆ ಎಫ್‍ಐಆರ್ ದಾಖಲಾಗಿದೆ. ವೃದ್ಧ ಕೆರಿಯಪ್ಪ ಬಾಂಬ್ ತಯಾರಿಸಿದ್ದಾಗಿದ್ದರೆ ಒಲೆಯಲ್ಲಿಟ್ಟುಕೊಂಡು ಬೆಂಕಿ ಹೊತ್ತಿಸುತ್ತಿದ್ದರೇ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಮೂಡುತ್ತದೆ. ಆಸ್ತಿ ವಿಚಾರವಾಗಿ ದ್ವೇಷದ ಕಾರಣದಿಂದ ಈ ಬಾಂಬ್ ತಂದು ಕೆರಿಯಪ್ಪರ ಮನೆ ಆವರಣದಲ್ಲಿ ಹಾಕಿರುವ ಶಂಕೆಯಿದ್ದು, ಪೊಲೀಸರು ಕೂಲಂಕಷವಾಗಿ ತನಿಖೆ ಮಾಡಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಬೇಕಿದೆ. ಸಾಗರ ಗ್ರಾಮಾಂತರ ಸಿಪಿಐ ಗಿರೀಶ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಅಂಶ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

Ad Widget

Related posts

ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರ:ಕೋಡಿಹಳ್ಳಿ ಚಂದ್ರಶೇಖರ್

Malenadu Mirror Desk

ಮಹಾಸ್ಫೋಟ ನಾಲ್ವರು ಆರೋಪಿಗಳು ಅಂದರ್

Malenadu Mirror Desk

ಹೊಸ ವರ್ಷದ ಶುಭಾಶಯಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.