ಸೊರಬ: ಕೊರೊನಾ ವ್ಯಾಪಿಸಿದ ತರುವಾಯ ಅನೇಕ ಸಮಸ್ಯೆಗಳನ್ನು ಬಡವರು ಎದುರಿಸುವಂತಾಗಿದ್ದು, ಈ ನಿಟ್ಟಿನಲ್ಲಿ ದುಡಿದು ಬದುಕುತ್ತಿರುವ ಬಡ ಕುಟುಂಬಗಳಿಗೆ ಸಹಾಯ ಮಾಡಲಾಗುತ್ತಿದೆ ಎಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶ್ರೀಧರ ಆರ್. ಹುಲ್ತಿಕೊಪ್ಪ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿಯಿಂದ ಬುಧವಾರ ಚಂದ್ರಗುತ್ತಿ ಹೋಬಳಿಯ ಆಯ್ದ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಿ ಅವರು ಮಾತನಾಡಿದರು.
ದಸರಾ ಉತ್ಸವ ಸಮಿತಿಯು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿದೆ. ಶ್ರೀ ದೇವಿಯ ಸನ್ನಿಧಿಯಲ್ಲಿ ಕಳೆದ ೯ ವರ್ಷಗಳಿಂದ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಜತೆಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯ ಅವಕಾಶವನ್ನು ಒದಗಿಸಿಕೊಡಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ಕೊರೊನಾ ಅಟ್ಟಹಾಸ ಅಷ್ಟಾಗಿ ಕಾಣದಿದ್ದರೂ, ಲಾಕ್‌ಡೌನ್ ಜಾರಿಯಾದ ಪರಿಣಾಮ ಅನೇಕ ಬಡ ಕುಟುಂಬಗಳು ಸಂಕಷ್ಟವನ್ನು ಅನುಭವಿಸಿವೆ. ಆದ್ದರಿಂದ ದೇವರ ಹೆಸರಿನಲ್ಲಿ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಸುಮಾರು ೭೦ ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಲಾಗುತ್ತಿದೆ ಎಂದರು.
ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಯಶವಂತ್, ಉಪಾಧ್ಯಕ್ಷ ರಾಮಣ್ಣ ಸ್ವಾದಿ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಚಂದ್ರಗುತ್ತಿ, ಗ್ರಾ.ಪಂ ಅಧ್ಯಕ್ಷ ಎಂ.ಪಿ. ರತ್ನಾಕರ, ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಪ್ಪ, ಸದಸ್ಯ ರೇಣುಕಾ ಪ್ರಸಾದ್, ಶಶಿಕಾಂತ್, ವಿಶ್ವನಾಥ್, ಕೃಷ್ಣಪ್ಪ, ರವಿ ಸೇರಿದಂತೆ ಇತರರಿದ್ದರು.
previous post