ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಪತ್ರಿಕಾ ರಂಗದಲ್ಲಿ ಇಬ್ಬಗೆ ನೀತಿಗೆ ಬ್ರೇಕ್ ಹಾಕುವ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.ಕೊರೋನಾದ ಸಂಕಷ್ಟ ಪರಿಸ್ಥಿತಿಯಲ್ಲೂ ಜಿಲ್ಲಾಮಟ್ಟದ ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ತಾವುಗಳು ಗಮನಿಸಿದ್ದೀರಿ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಸ್ಥಳೀಯ ಪತ್ರಿಕೆಗಳು ಆರೋಗ್ಯ ರಕ್ಷಣೆಗೆ ಪೂರಕವಾದ ಮಾಹಿತಿಗಳನ್ನು ಮುದ್ರಿಸಿ ಜನರಿಗೆ ತಲುಪಿಸುತ್ತಿರುವ ರಾಜ್ಯದ ಎಲ್ಲ ಜಿಲ್ಲಾ ಮಟ್ಟದ ಹಾಗೂ ಪ್ರಾದೇಶಿಕ ಪತ್ರಿಕೆಗಳನ್ನು ಸರ್ಕಾರ ಗಂಭೀರವಾಗಿ ಗಮನಿಸಬೇಕು ಎಂದರು.
ರಾಜ್ಯ ಸರ್ಕಾರ ಕೊರೋನಾದ ಈ ಅವಧಿಯಲ್ಲಿ ರಾಜ್ಯಮಟ್ಟದ ಪತ್ರಿಕೆಗಳಿಗೆ ಎಲ್ಲಾ ಇಲಾಖೆಗಳ ಜಾಹಿರಾತುಗಳನ್ನು ನೀಡುತ್ತಲೇ ಬಂದಿದೆ. ಆದರೆ ಅತ್ಯಂತ ಕಷ್ಟದಲ್ಲೂ ದುಬಾರಿ ವೆಚ್ಚ ಆದರೂ ಸಹ ಮುದ್ರಿಸಿ ಸರ್ಕಾರದ ವಿಷಯಗಳನ್ನು ಜನರ ಗಮನಕ್ಕೆ ತರುವಂತಹ ಕಾರ್ಯವನ್ನು ಸುಸೂತ್ರವಾಗಿ ಸ್ಥಳೀಯ ಪತ್ರಿಕೆಗಳು ಮಾಡುತ್ತಿದ್ದರೂ ಸಹ ಸರ್ಕಾರ ಸ್ಥಳೀಯ ಪತ್ರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಜಾಹೀರಾತು ನೀತಿ 2013, ಅನುಷ್ಠಾನ ನಿಯಮಗಳು ೨೦೧೪ ಮುಕ್ತಾಯಗೊಂಡು ಒಂದು ವರ್ಷ ಹತ್ತು ತಿಂಗಳು ಕಳೆದರೂ ಜಾಹೀರಾತು ನೀತಿ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರುತ್ತಿದ್ದು, ಈ ಕೂಡಲೇ ಜಾಹೀರಾತು ನೀತಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ದುಬಾರಿ ಮುದ್ರಣ ವೆಚ್ಚ, ಕಚೇರಿ, ಇಂಟರ್ನೆಟ್, ಸಿಬ್ಬಂದಿಗಳ ವೇತನ, ಪತ್ರಿಕೆ ವಿತರಕರ ಆಗುಹೋಗುಗಳನ್ನು ಗಮನಿಸುತ್ತಿರುವ ಜಿಲ್ಲಾ ಪತ್ರಿಕಾ ಸಂಪಾದಕರು ಈ ದಿನಗಳಲ್ಲಿ ಹೈರಾಣಾಗಿದ್ದಾರೆ. ಇವರ ನೆರವಿಗೆ ರಾಜ್ಯ ಸರ್ಕಾರ ಬರಬೇಕಾಗಿದ್ದು ಧರ್ಮ. ಆದರೆ, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರವು ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡುವುದನ್ನೇ ಸಂಪೂರ್ಣವಾಗಿ ಮರೆತುಬಿಟ್ಟಿದೆ ಎಂದರು.
ಮಾತೃಭಾಷೆ ಪತ್ರಿಕೆಗಳನ್ನು ಮರೆತಂತಿರುವ ಸರ್ಕಾರ ಅನ್ಯ ಭಾಷೆ ಪತ್ರಿಕೆಗಳಿಗೆ ಜಾಹೀರಾತು ನೀಡಿ ಮಾತೃಭಾಷೆಗೆ ದ್ರೋಹ ಬಗೆದಂತಾಗಿದೆ. ಕೂಡಲೇ ನಮ್ಮ ಮನವಿಯನ್ನು ಪುರಸ್ಕರಿಸಿ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳು ಕನಿಷ್ಟ ಒಂದು ಪುಟ ಜಾಹೀರಾತು ನೀಡಿ ಕನ್ನಡ ಹಾಗೂ ಸ್ಥಳೀಯ ಪತ್ರಿಕೆಗಳ ಉಳಿವಿಗೆ ನೆರವಾಗುವಂತೆ ವಿನಂತಿಸಿದರು.
ಜಿಲ್ಲಾ ಸ್ಥಳಿಯ ಪತ್ರಿಕೆ ಸಂಪಾದಕರಾದ ಎಸ್. ಚಂದ್ರಕಾಂತ್, ಜಿ. ಪದ್ಮನಾಭ್, ಭಂಡಿಗಡಿ ನಂಜುಂಡಪ್ಪ, ಎಸ್.ಕೆ. ಗಜೇಂದ್ರಸ್ವಾಮಿ, ಜಿ. ಚಂದ್ರಶೇಖರ್, ಭರತೇಶ್, ಹಿತಕರ ಜೈನ್, ರಾಮಚಂದ್ರರಾವ್, ಶ್ರೀನಿವಾಸ್, ಶಶಿಕುಮಾರ್, ಸೂರ್ಯನಾರಾಯಣ್, ನಾಗೇಶ್ ನಾಯ್ಕ್, ಕಣ್ಣಪ್ಪ, ಮಂಜುನಾಥ, ಗಾ.ರಾ. ಶ್ರೀನಿವಾಸ್, ಸುಭಾಷ್, ಲಿಯಾಖತ್ , ಸಾಗರದ ಶೈಲೇಂದ್, ಅಖಿಲೇಶ್ ಇತರರಿದ್ದರು.