ಭದ್ರಾ ಜಲಾಶಯದ ಗರ್ಭದಲ್ಲಿಯೇ ಭಾರಿ ಭ್ರಷ್ಟಾಚಾರ ನಡೆದಿದ್ದು, ಇದನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಜಲಾಶಯವನ್ನು ಉಳಿಸಬೇಕು ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಒತ್ತಾಯಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನೊಂದಿಗೆ ಭದ್ರಾ ಜಲಾಶಯದಲ್ಲಿ ಕೈಗೊಂಡಿರುವ ದುರಸ್ತಿ ಕಾಮಗಾರಿ ಭ್ರಷ್ಟಾಚಾರ ಕುರಿತಂತೆ ಮಾಧ್ಯಮದವರೊಂದಿಗೆ ಪರಿಶೀಲನೆ ನಡೆಸಿ, ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕನ್ನಡ ನಾಡಿನ ಬಹುದೊಡ್ಡ ಜಲಾಶಯ ಭದ್ರಾ ಜಲಾಶಯವಾಗಿದೆ. ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರು, ಕೈಗಾರಿಕೆ ಮತ್ತು ನೀರಾವರಿಗಾಗಿ ಇರುವ ಏಕೈಕ ಯೋಜನೆ ಇದಾಗಿದೆ. ಇಂತಹ ಜಲಾಶಯದ ದುರಸ್ತಿ ಕಾರ್ಯ 2016 -17 ರಲ್ಲಿ ಆರಂಭವಾಗಿ 18 ರಲ್ಲಿ ಪೂರ್ನಗೊಂಡಿದೆ. ಆದರೆ, ಕಾಮಗಾರಿ ಮುಗಿದ ನಂತರದಲ್ಲಿ ನೀರು ಬಿಟ್ಟಾಗ ಇಡೀ ಕಾಮಗಾರಿಯೇ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ಅತ್ಯಂತ ಕಳಪೆ ಕಾಮಗಾರಿ ಇದಾಗಿದ್ದು, ಸುಮಾರು 7 ಕೋಟಿ ರೂ. ಹಣ ಜಲಾಶಯದ ತಳದಲ್ಲಿಯೇ ಮುಚ್ಚಿಹೋಗಿದ್ದು, ಅತ್ಯಂತ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಭದ್ರಾ ಜಲಾಶಯದ ಬುಡದಲ್ಲಿಯೇ ಈ ಬಹುದೊಡ್ಡ ಹಗರಣ ನಡೆದಿದೆ. ಖಾಸಗಿ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವೆ ಯಾವ ಹೊಂದಾಣಿಕೆಯೂ ಇರಲಿಲ್ಲ. ಈಗ ಜಲಾಶಯಕ್ಕೆ ಕುತ್ತು ಬಂದಿದೆ ಎಂದು ಗೊತ್ತಾಗಿದೆ. ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ದುರಸ್ತಿ ಮಾಡದೇ ಹೋದರೆ ಇಡೀ ಜಲಾಶಯಕ್ಕೆ ಹಾನಿಯಾಗಬಹುದೆಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು.
ಈ ದುರಸ್ತಿ ಯೋಜನೆಯೇ ಅವೈಜ್ಞಾನಿಕವಾಗಿತ್ತು. ಯಾವುದೇ ಯೋಜನೆ ಆರಂಭಕ್ಕೆ ಮೊದಲು ತಜ್ಞರ ಸಮಿತಿಯ ಒಪ್ಪಿಗೆ ಬೇಕಿತ್ತು. ಇವರು ಯಾವ ಒಪ್ಪಿಗೆಯನ್ನೂ ಪಡೆಯದೇ ಹಣ ದೋಚಲೆಂದೇ ಒಂದು ಕೃತಕ ಯೋಜನೆಯನ್ನೇ ರೂಪಿಸಿದ್ದರು. ಜಲಾಶಯದ ಆಳಕ್ಕೆ ರಿಪೇರಿ ಮಾಡಲು ಹೋಗಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಿದ್ದಾರೆ. ಕೇವಲ ಒಮ್ಮೆ ನೀರು ಬಿಟ್ಟಿದ್ದಕ್ಕೆ ಈ ಕಾಮಗಾರಿ ಸಂಪೂರ್ಣ ನಾಶವಾಯಿತಲ್ಲದೇ, ಅಣೆಕಟ್ಟಿನ ತಳಭಾಗದಲ್ಲಿ ಕಾಮಗಾರಿ ನಡೆಸಿದ್ದರಿಂದ ಜಲಾಶಯದ ತಡೆಗೋಡೆಗೆ ಹಾನಿಯಾಗಿದೆ. ಇದರಿಂದ ವಿಪರೀತ ನೀರು ಸೋರಿಕೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಜಲಾಶಯದ ನಾಶ ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಆ ಪ್ರದೇಶದಲ್ಲಿ ಮೊಕ್ಕಾಂ ಹೂಡಿ ತಜ್ಞರೊಂದಿಗೆ ಪರಿಶೀಲನೆ ನಡೆಸಿದ್ದೇವೆ. ಇದೊಂದು ದೊಡ್ಡ ಹಗರಣವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನೀರಾವರಿ ಸಚಿವರು ಇದರ ಸಂಪೂರ್ಣ ತನಿಖೆ ನಡೆಸಬೇಕು. ಅಷ್ಟೇ ಅಲ್ಲ, ಜಲಾಶಯದ ಉಳಿವಿಗಾಗಿ ಹೊಸದಾಗಿ ಯಾವ ಕಾಮಗಾರಿಗಳನ್ನು ಮಾಡಬೇಕೆಂದು ನಿರ್ಧರಿಸಬೇಕು. ಇದರ ಎಲ್ಲಾ ಹೊಣೆಯನ್ನು ಗುತ್ತಿಗೆದಾರನ ಮೇಲೆ ಹಾಕಬೇಕು. ಲೂಟಿ ಹೊಡೆದವರ ವಿರುದ್ಧ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಹಾಜರಿದ್ದರು.