ಡಾ.ರಾಜನಂದಿನಿ ಕಾಗೋಡು ಅವರಿಂದ ಆಹಾರ ಕಿಟ್ ವಿತರಣೆ
ದೇಶದ ಎಲ್ಲರಿಗೂ ಕೋವಿಡ್ ಪ್ರತಿಬಂಧಕ ಲಸಿಕೆ ಮುಫತ್ತಾಗಿ ಕೊಡಬೇಕು. ಆಗ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರು ಪದೇಪದೇ ಉಚ್ಛರಿಸುವ ಸಬ್ ಕೆ ಸಾಥ್ ಸಬ್ ಕೆ ವಿಕಾಸ್ ಮಾತಿಗೆ ಅರ್ಥ ಬರುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಸಾಗರ ತಾಲ್ಲೂಕಿನ ಭಾನ್ಕುಳಿ ಗ್ರಾಮ ಪಂಚಾಯ್ತಿಯಲ್ಲಿ ಕರೂರು-ಭಾರಂಗಿ ಹೋಬಳಿಯ ೮ ಗ್ರಾಮ ಪಂಚಾಯ್ತಿಗಳಿಗೆ ಬುಧವಾರ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಅವರು ವೈಯಕ್ತಿಕವಾಗಿ `ಅಳಿಲು ಸೇವೆ’ ಹೆಸರಿನಲ್ಲಿ ಬಡವರಿಗೆ ನೀಡುತ್ತಿರುವ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಈಗಾಗಲೆ ಲಸಿಕೆ ಸಿಗದೆ ದೊಡ್ಡಮಟ್ಟದಲ್ಲಿ ಜನರು ಲಸಿಕಾ ಕೇಂದ್ರಗಳಿಂದ ವಾಪಾಸ್ ಹೋಗುತ್ತಿರುವ ಮಾಹಿತಿ ಬರುತ್ತಿದೆ. ಪ್ರತಿಯೊಂದು ಯೋಜನೆ ರೂಪಿಸುವಾಗ ಸೂಕ್ತ ಮುಂದಾಲೋಚನೆ ಅಗತ್ಯ. ಕಾಂಗ್ರೇಸ್ ಪಕ್ಷದ ವತಿಯಿಂದ ಎಲ್ಲರಿಗೂ ಲಸಿಕೆ ನೀಡುವಂತೆ ಒತ್ತಾಯಿಸಿ ಶೀಘ್ರದಲ್ಲಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದ ಜನರು ಹೆಚ್ಚು ಜಾಗೃತಿಯಿಂದ ಇರಬೇಕು. ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಬಡ ಕುಟುಂಬಗಳಿಗೆ ಅಳಿಲುಸೇವೆ
ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ನಮ್ಮ ತಂದೆ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಇಂದಿಗೂ ಜನಪರ ಕಾಳಜಿಯನ್ನು ಇರಿಸಿಕೊಂಡು ನಿಮ್ಮ ನಡುವೆ ಇದ್ದು ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಅಳಿಲುಸೇವೆ ಹೆಸರಿನಲ್ಲಿ ಸಹಾಯ ಮಾಡಲು ನಮ್ಮ ತಂದೆಯವರೆ ನನಗೆ ಪ್ರೇರಣೆಯಾಗಿದ್ದಾರೆ. ತಾಲ್ಲೂಕಿನ ಜನರು ನಮ್ಮ ಸಾಮಾಜಿಕ ಸೇವೆಯನ್ನು ಪ್ರೋತ್ಸಾಹಿಸುವ ಮೂಲಕ ತಂದೆಯವರಿಗೆ ಆಶೀರ್ವಾದ ಮಾಡಿದಂತೆ ನಮಗೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕಾಂಗ್ರೇಸ್ ಪ್ರಮುಖರಾದ ಮಧುಮಾಲತಿ, ವೆಂಕಟೇಶ್ ಮೆಳವರಿಗೆ, ಪ್ರಶಾಂತ್ ಕೆ.ಎಸ್., ರಮೇಶ್ ಮರಸ, ಸೋಮರಾಜ್, ಶ್ರೀಧರ ಭಾನ್ಕುಳಿ ಇನ್ನಿತರರು ಹಾಜರಿದ್ದರು.