ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕು ಎಂದು ಕೆಪಿಸಿಸಿ ಸದಸ್ಯ ಹಾಗೂ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮಲೆನಾಡಿನ ಜಿಲ್ಲೆಯಾಗಿದ್ದು, ಜಿಲ್ಲೆಯ ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕವಿಯಾಗಿದ್ದು, ವಿಶ್ವಮಾನವ ಸಂದೇಶವನ್ನು ಸಾರಿದವರು. ಕನ್ನಡ ಸಾರಸ್ವತ ಲೋಕದ ಮೇರುಕವಿಯಾಗಿದ್ದಾರೆ. ಇಂತಹ ರಾಷ್ಟ್ರಕವಿ ಕುವೆಂಪು ಹೆಸರನ್ನು ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಇಡುವುದು ಅತ್ಯಂತ ಸೂಕ್ತವಾದುದು ಮತ್ತು ಸರ್ಕಾರಕ್ಕೆ ಶೋಭೆ ತರುವಂತಹುದಾಗಿದೆ ಎಂದರು.
ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಕೆಲವು ಆರೋಪ ಕೇಳಿಬರುತ್ತಿದೆ. ಇದು ಕಮಲದ ಆಕಾರದಲ್ಲಿದೆ. ಕಮಲ ಬಿಜೆಪಿ ಚಿಹ್ನೆಯಾಗಿದೆ. ಪಕ್ಷದ ಚಿಹ್ನೆಯೊಂದನ್ನು ಹೀಗೆ ಬಳಕೆ ಮಾಡುವುದು ಈ ರೀತಿ ವಿನ್ಯಾಸದ ನಿರ್ಮಾಣವನ್ನು ಕೂಡಲೇ ನಿಲ್ಲಿಸಬೇಕು. ಹಾಗೂ ಬದಲಾವಣೆ ಮಾಡಬೇಕೆಂದು ಅವರು ಆಗ್ರಹಿಸಿದರು.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿ ಬಿ.ಎಸ್.ಪಿ. ಪಕ್ಷದ ಚಿಹ್ನೆಯಾಗಿದ್ದ ಆನೆಗಳ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಾಲಯ ಈ ರೀತಿ ಚಿಹ್ನೆ ಬಳಸುವಂತಿಲ್ಲ ಎಂದು ಆದೇಶ ನೀಡಿತ್ತು. ಅಷ್ಟೇ ಅಲ್ಲ, ಹಾಗೆ ಬಳಸಿದರೆ ಆ ಪಕ್ಷ ಚಿಹ್ನೆಯನ್ನೇ ಕಳೆದುಕೊಳ್ಳಲಿದೆ ಎಂದು ಆದೇಶ ನೀಡಿತ್ತು. ಆದ್ದರಿಂದ ಬಿಜೆಪಿಯವರೂ ಕೂಡ ಕಮಲದ ವಿನ್ಯಾಸದ ಟರ್ಮಿನಲ್ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿರೋಧದ ನಡುವೆಯೂ ಬಿಜೆಪಿ ಸರ್ಕಾರ ನೀಲ ನಕ್ಷೆಯಲ್ಲಿ ತೋರಿಸಿರುವಂತೆ ಕಮಲದ ಚಿಹ್ನೆ ರೀತಿಯಲ್ಲಿ ಟರ್ಮಿನಲ್ ವಿನ್ಯಾಸ ನಿರ್ಮಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭದ್ರಾವತಿ ಗಣೇಶ್, ಪ್ರಶಾಂತ್ ಸಾಗರ, ಗೋವಿಂದಸ್ವಾಮಿ, ಸತ್ಯನಾರಾಯಣ ಇದ್ದರು.